ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿ ಮಟ್ಟದ ಮಾದಕ ದ್ರವ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣ ಎನ್ನುವ ಸಂಕಲ್ಪದೊಂದಿಗೆ `ವಿಮುಕ್ತಿ' ಕಾರ್ಯಕ್ರಮವು ಕೊಡ್ಲಮೊಗರಿನ ವಾಣೀವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ಸಂಚಾಲಕ ಶಂಕರಮೋಹನ ಪೂಂಜಾ, ಪಂಚಾಯತಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಪದ್ಮನಾಭ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಮಾಲುದ್ದೀನ್, ಮುಖ್ಯೋಪಾಧ್ಯಾಯಿನಿ ಭಾರತಿ, ಮಾತೃಸಂಘದ ಅಧ್ಯಕ್ಷೆ ಅವ್ವಮ್ಮ ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಚಂದ್ರ ಕುಮಾರ್ ಸ್ವಾಗತಿಸಿ, ಹೈಯರ್ ಸೆಕೆಂಡರಿ ಅಧ್ಯಾಪಕಿ ಸ್ಮಿತಾ ವಂದಿಸಿದರು. ಅದಕ್ಕೂ ಮೊದಲು ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ಗ್ರಾಮ ಪಂಚಾಯತಿ ಮಟ್ಟದ ಶಾಲೆಗಳಲ್ಲಿ ಇದರ ಪ್ರಯುಕ್ತವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಟ್ರೋಫಿ ವಿತರಿಸಲಾಯಿತು. ಅಬಕಾರಿ ಇಲಾಖೆಯ ಜಯರಾಜನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.