ಮಂಜೇಶ್ವರ: ರಸ್ತೆ ಡಾಮರೀಕರಣ ನಡೆಸಿದ ಬಳಿಕ ತೆರವುಗೊಳಿಸದೆ ಅಲ್ಲೇ ಬಿಟ್ಟು ಹೋದ ಜಲ್ಲಿ ಹುಡಿಯ ಮೇಲೆ ಸ್ಕಿಡ್ ಆದ ಬೈಕ್ ನಿಂದ ರಸ್ತೆಗೆಸೆಯಲ್ಪಟ್ಟ ಇಬ್ಬರು ಯುವಕರ ಮೇಲೆ ಅಮಿತ ವೇಗದಿಂದ ಆಗಮಿಸಿದ ಕರ್ನಾಟಕ ಸಾರಿಗೆ ಬಸ್ಸು ಚಾಲಕನಿಗೆ ಬಸ್ಸನ್ನು ನಿಯಂತ್ರಿಸಲು ಸಾಧ್ಯವಾಗದೆ ಇಬ್ಬರ ತಲೆಯ ಮೇಲೆ ಬಸ್ಸಿನ ಚಕ್ರ ಹರಿದು ಇಬ್ಬರು ಯುವಕರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .
ಭಾನುವಾರ ಸಂಜೆ 3. 15 ರ ಸುಮಾರಿಗೆ ಮಂಜೇಶ್ವರ ಎರಡು ಮಾರ್ಗಗಳು ಜೋಡಣೆಯಾಗುವ ಸಂಧ್ಯಾ ಗ್ಯಾರೇಜ್ ರಾ. ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಸರಗೋಡಿನಿಂದ ಮಂಗಳೂರು ಕಡೆ ತೆರಳುತ್ತಿರುವ ಕರ್ನಾಟಕ ಸಾರಿಗೆ ಬಸ್ಸು ಹಾಗೂ ಮಂಗಳೂರು ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ಕಾಸರಗೋಡು ಕೂಡ್ಲು ರಾಮದಾಸ್ ನಗರ ನಿವಾಸಿ ಜಗದೀಶ್ (22) ಹಾಗೂ ಆತನ ಸ್ನೇಹಿತ ಕೂಡ್ಲು ಆರ್ ಡಿ ನಗರ ನಿವಾಸಿ ಸುನಿಲ್ (22) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ .
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಅಪಘಾತಕೀಡಾದ ವಾಹನಗಳನ್ನು ಮಂಜೇಶ್ವರ ಠಾಣೆಗೆ ಕೊಂಡೊಯ್ಯಲಾಗಿದೆ . ರಾ. ಹೆದ್ದಾರಿ ಮರು ಡಾಮರೀಕರಣ ನಡೆಸಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ ಜಲ್ಲಿ ಹುಡಿಗಳನ್ನು ಸ್ಥಳೀಯರು ಅಲ್ಲಿಂದ ತೆರವುಗೊಳಿಸಿ ಮಾದರಿಯಾಗಿದ್ದಾರೆ . ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.