ಮಂಜೇಶ್ವರ: ಹೊಸಂಗಡಿಯ ರೈಲ್ವೇ ಗೇಟ್ ಕಳೆದ 7 ತಿಂಗಳಿನಲ್ಲಿ ಆರು ಭಾರಿ ಮುರಿದು ಬಿದ್ದು ರೈಲ್ವೇ ಅಧಿಕಾರಿಗಳ ಅನಾಸ್ಥೆಗೆ ಮೂಕ ಸಾಕ್ಷಿಯಗಿದೆ.
ಶನಿವಾರ ಬೆಳಿಗ್ಗೆ ಮುರಿದು ಬಿದ್ದು ಸತತವಾಗಿ ಅರನೇ ಬಾರಿ ಮುರಿದು ಬೀಳುತ್ತಿರುವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಮಂಗಳೂರಿಂದ ತಿರುವನಂತಪುರಕ್ಕೆ ತೆರಳುವ ಪರಶುರಾಮ ಎಕ್ಸ್ ಪ್ರೆಸ್ ಗೆ ತೆರಳಲು ಗೇಟ್ ಹಾಕುತ್ತಿರುವಾಗ ಗೇಟ್ ಮುರಿದು ಬಿದ್ದಿದೆ. ಈ ಮೊದಲು ಐದು ಬಾರಿ ಬಿದ್ದಾಗಲೂ ತಾತ್ಕಾಲಿಕವಾಗಿ ದುರಸ್ಥಿ ನಡೆಸಿ ಸರಿಪಡಿಸಲಾಗಿತ್ತು. ಆದರೆ ಅದು ಶಾಶ್ವತ ಪರಿಹಾರ ಅಲ್ಲ ಎಂಬುದನ್ನು ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಅನಾಸ್ಥೆಯನ್ನು ಎತ್ತಿ ತೋರಿಸುತ್ತರುವುದಾಗಿ ಸ್ಥಳೀಯರ ಅಭಿಪ್ರಾಯವಾಗಿದೆ. ಬೆಳಿಗ್ಗೆ ಮುರಿದು ಬಿದ್ದ ಗೇಟನ್ನು ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಸರಿಪಡಿಸಲಾಗಿದೆ.
ರೈಲ್ವೇ ಯದ್ದು ಮುಗಿಯದ ಕಥೆ:
ರೈಲ್ವೇ ಇಲಾಖೆ ಗಡಿ ಪ್ರದೇಶಗಳಲ್ಲಿ ತಮ್ಮ ಬೇಜವಾಬ್ದಾರಿ ಕ್ರಮಗಳ ಮೂಲಕ ನಿತ್ಯ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ರೈಲು ಸಂಚರಿಸುವ ವೇಳೆ ಗೇಟ್ ಹಾಕುವ ಸಂದರ್ಭ ಹತ್ತು ಹಲವಾರು ವಾಹನಗಳು ಗೇಟ್ ನ ಎರಡೂ ಬದಿಗಳಲ್ಲಿ ಕಿಕ್ಕಿರಿದು ನಿಂತಿರುತ್ತಿದ್ದು, ಗೇಟ್ ಮುರಿದು ಬೀಳುವ ವೇಳೆ ನಿಲ್ಲಿಸಿದ್ದ ವಾಹನಗಳ ಮೇಲೆ ಬೀಳದಿರುವುದು ಸುದೈವವೆಂದೇ ಭಾವಿಸಲಾಗುತ್ತಿದೆ. ಹಾಗೊಂದು ವೇಳೆ ಆಗುತ್ತಿದ್ದರೆ ಅಪಾರ ನಷ್ಟಗಳೊಂದಿಗೆ ಜೀವಹಾನಿಯೂ ಆಗುವ ಸಾಧ್ಯತೆ ಇದೆ.
ಜೊತೆಗೆ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಇಲ್ಲದಿರುವುದರಿಂದ ವಾಹನಗಳು, ಪಾದಚಾರಿಗಳು ತಾಸುಗಟ್ಟಲೆ ಕಾಯಬೇಕಾದ ಸ್ಥಿತಿಯೂ ಇದೆ.