ಕಾಸರಗೋಡು: ಹಸಿರು ಕೇರಳ ಯೋಜನೆಯ ಮೂರನೇ ವಾರ್ಷಿಕೋತ್ಸವದನ್ವಯ ಜಲಸಂರಕ್ಷಣಾ ಚಟುವಟಿಕೆ ಅಂಗವಾಗಿ ರಾಜ್ಯವ್ಯಾಪಕವಾಗಿ ನಡೆಸುತ್ತಿರುವ'ಇನ್ನು ನಾನು ಹರಿಯಲೇ...'ಯೋಜನೆಯಲ್ಲಿ ಒಳಪಡಿಸಿ ಮಡಿಕೈ ಪಂಚಾಯಿತಿಯ ಏಚಿಕ್ಕಾನ ತೋಡಿನ ಪುನರುಜ್ಜೀವನ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಮಾನೂರಿನಿಂದ ಅರಯಿ ವರೆಗಿನ ಸುಮಾರು 15ಕಿ.ಮೀ ದೂರದವರೆಗೆ ತೋಡಿನ ಶುಚೀಕರಣ ನಡೆಸಲಾಯಿತು. ಕೆಲವು ವರ್ಷಗಳ ಹಿಂದಿನ ವರೆಗೂ ವರ್ಷಪೂರ್ತಿ ಹರಿಯುತ್ತಿದ್ದ ಈ ತೋಡು, ಇಂದು ಜನವರಿ ತಿಂಗಳಿಗೇ ಬರಡಾಗುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶುಚಿತ್ವ ಮಿಶನ್ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಈ ಪ್ರದೇಶದ ಕೆಲವೊಂದು ತೋಡುಗಳನ್ನು ಶುಚೀಕರಣಗೊಳಿಸುವುದರ ಜತೆಗೆ ತಡೆಗೋಡೆ ನಿರ್ಮಿಸಿ, ವರ್ಷಪೂರ್ತಿ ತೋಡಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.
ಕೇರಳ ಶುಚಿತ್ವ ಮಿಶನ್ ಕಾಸರಗೋಡು ಜಿಲ್ಲಾ ಸಂಚಾಲಕ ಎಂ.ಪಿ ಸುಬ್ರಹ್ಮಣ್ಯನ್ ಸಮಾರಂಭ ಉದ್ಘಾಟಿಸಿದರು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಿ.ಪ್ರಮೀಳಾ, ಸ್ಥಾಯೀ ಸಮಿತಿ ಅಧ್ಯಕ್ಷ ಶಶೀಂದ್ರನ್ ಮಡಿಕೈ, ಗ್ರಾಪಂ ಸದಸ್ಯರು, ಕುಟುಂಬಶ್ರೀ ಸದಸ್ಯರು, ನೆರೆಕರೆ ಕೂಟ, ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.