ಮುಂಬೈ: ಲೋಕಸಭೆಯಲ್ಲಿ ನಮ್ಮ ಪಕ್ಷ ಎತ್ತಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವವರೆಗೆ ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಗೆ ಬೆಂಬಲ ನೀಡುವುದಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಗಳವಾರ ಹೇಳಿದ್ದಾರೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಪೌರತ್ವ(ತಿದ್ದುಪಡಿ) ಮಸೂದೆ ನಾಳೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಇದರ ಬೆನ್ನಲೇ ದೇಶದ ಹಲವು ಕಡೆ ಹಾಗೂ ವಿದೇಶದಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿಯ ಮಾಜಿ ಮೈತ್ರಿ ಪಕ್ಷ ಶಿವಸೇನಾ ಸಹ ವಿರೋಧ ವ್ಯಕ್ತಪಡಿಸಿದೆ.ಪೌರತ್ವ ಮಸೂದೆ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯ ಇದೆ ಎಂದಿರುವ ಮಹಾ ಸಿಎಂ, ಮೋದಿ ಸರ್ಕಾರ ಈ ಮಸೂದೆಗಿಂತ ಹೆಚ್ಚು ದೇಶದ ಆರ್ಥಿಕತೆ ಬಗ್ಗೆ, ಉದ್ಯೋಗದ ಬಗ್ಗೆ ಬೆಲೆ ಏರಿಕೆ ಬಗ್ಗೆ ವಿಶೇಷವಾಗಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಮೊದಲು ಗಮನ ಹರಿಸಲಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.ಪೌರತ್ವ ಮಸೂದೆಗೆ ಸಂಬಂಧಿಸಿದಂತೆ ನಾವು ಎತ್ತಿದ ಪ್ರಶ್ನೆಗಳಿಗೆ ಮೋದಿ ಸರ್ಕಾರ ಮೊದಲು ಉತ್ತರಿಸಲಿ. ಮಸೂದೆಯ ಕುರಿತು ಯಾವುದೇ ನಾಗರಿಕನಲ್ಲಿ ಹೆದರಿಕೆ ಉಂಟಾಗಿದ್ದರೆ, ಅವರ ಎಲ್ಲ ಗೊಂದಲಗಳನ್ನು ಮೊದಲು ಪರಿಹರಿಸಬೇಕು. ಅವರು ನಮ್ಮ ಪ್ರಜೆಗಳಾಗಿದ್ದು, ಅವರ ಪ್ರಶ್ನೆಗಳಿಗೂ ಉತ್ತರಿಸುವುದು ಅತ್ಯಗತ್ಯ. ಯಾರೇ ಒಬ್ಬ ವ್ಯಕ್ತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎಂದರೆ ಆತ 'ದೇಶದ್ರೋಹಿ' ಎಂಬುದು ಅವರ ಭ್ರಮೆಯಾಗಿದೆ. ಪೌರತ್ವ ತಿದ್ದುಪಡಿ ಮಸೂದೆಗೆ ಕೆಲವು ಬದಲಾವಣೆಗಳ ಸಲಹೆಗಳನ್ನು ನಾವು ನೀಡಿದ್ದೇವೆ. ದೇಶದ ಬಗ್ಗೆ ಕೇವಲ ಬಿಜೆಪಿ ಮಾತ್ರವೇ ಕಾಳಜಿ ಹೊಂದಿದೆ ಎಂಬುದೂ ಸಹ ಭ್ರಮೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಗೃಹ ಸಚಿವ ಅಮಿತ್ ಶಾ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಮುಂದಿಟ್ಟಾಗ ಶಿವಸೇನಾ ಬೆಂಬಲ ವ್ಯಕ್ತಪಡಿಸಿತ್ತು. ಅದರೊಂದಿಗೆ ಕೆಲವು ಬದಲಾವಣೆಗಳನ್ನೂ ತರುವಂತೆ ಸಲಹೆ ನೀಡಿತು. ಶ್ರೀಲಂಕಾದಿಂದ ಬಂದವರು ಸೇರಿದಂತೆ ಯಾವುದೇ ವಲಸಿಗರಿಗೂ 25 ವರ್ಷಗಳ ವರೆಗೂ ಮತದಾನದ ಹಕ್ಕು ನೀಡದಿರುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ತರುವಂತೆ ಸಲಹೆ ನೀಡಿದೆ.