ಪೆರ್ಲ: ತೆಂಕುತಿಟ್ಟಿನ ಖ್ಯಾತ ಭಾಗವತ, ಪೆರ್ಲ ಸತ್ಯನಾರಾಯಣ ಶಾಲಾ ಶಿಕ್ಷಕ ಸತೀಶ ಪುಣಿಚಿತ್ತಾಯ ಪೆರ್ಲ ಅವರು ಯಕ್ಷಗಾನ ಭಾಗವತಿಕೆಯ ತೌಲನಿಕ ಅಧ್ಯಯನ ಎಂಬ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಘೋಶಿಸಲಾಗಿದೆ.
ಸತೀಶ ಪುಣಿಂಚಿತ್ತಾಯರು ಭಾಗವತಿಕೆಯ ಶಕ ಪುರುಷ ಅಜ್ಜ ಬಲಿಪರ ಪಾರಂಪರಿಕ ಶಿಷ್ಯರಾದ ಕೋಟೆ ನಾರಾಯಣ ಭಟ್ಟರಿಂದ ಭಾಗವತಿಕೆಯನ್ನು ಅಭ್ಯಸಿದವರು. ಯಕ್ಷಗಾನ ಅರ್ಥಧಾರಿಗಳಾದ ಗಣಪತಿ ಪುಣ್ಚಿತ್ತಾಯ - ಸೀತಾ ದಂಪತಿಗಳ ಪುತ್ರನಾದ ಸತೀಶ್ ಪುಣ್ಚಿತ್ತಾಯರ ಸಹೋದರ ಸತ್ಯನಾರಾಯಣ ಪುಣ್ಚಿತ್ತಾಯರು ತೆಂಕು -ಬಡಗು ಭಾಗವತಿಕೆಯ ಸವ್ಯಸಾಚಿಯಾಗಿದ್ದಾರೆ. ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್ಟರ ಮಾರ್ಗದರ್ಶನದಲ್ಲಿ ತೆಂಕು ಬಡಗು ಭಾಗವತಿಕೆಯ ಅಧ್ಯಯನವನ್ನು ನಡೆಸಿದ ಸತೀಶ್ ಪುಣ್ಚಿತ್ತಾಯರು ಪ್ರಬಂಧವನ್ನು ಮಂಡಿಸಿದ್ದರು. ಸಮರ್ಥ ಯಕ್ಷಗಾನ ಸಂಘಟಕರಾಗಿರುವ ಪುಣಿಂಚಿತ್ತಾಯರು ಈ ಹಿಂದೆ ಹವ್ಯಾಸಿ ಭಾಗವತರಾಗಿ ಹಲವಾರು ಕಲಾವಿದರನ್ನು ಪೆÇ್ರೀತ್ಸಾಹಿಸಿ ಯಕ್ಷ ರಂಗಕ್ಕೆ ಕೊಡುಗೆಯಾಗಿಸಿದ್ದಾರೆ. ತೆಂಕು ತಿಟ್ಟಿನ ಪ್ರಸಿದ್ಧ ಮೇಳಗಳಾದ ಮಂಗಳಾದೇವಿ,ಬಪ್ಪನಾಡು ಮೊದಲಾದ ಮೇಳಗಳಲ್ಲಿ ವೃತ್ತಿಪರ ಭಾಗವತರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಕೊಲ್ಲಂಗಾನ ಮೇಳದ ಪ್ರಧಾನ ಭಾಗವತರಾಗಿದ್ದಾರೆ. ಪತ್ನಿ ಮಧುರ ಪುಣ್ಚಿತ್ತಾಯರೊಂದಿಗೆ ಸಂತೃಪ್ತ ಸಂಸಾರ ಹೊಂದಿರುವ ಇವರು ಪುತ್ರ ಸಮೃದ್ಧ ಪುಣ್ಚಿತ್ತಾಯನಿಗೆ ಎಳವೆಯಿಂದಲೇ ಭಾಗವತಿಕೆ ಅಭ್ಯಾಸಿಸುತ್ತಿದ್ದು ಯಕ್ಷ ರಂಗಕ್ಕೆ ಉದಾತ್ತ ಕೊಡುಗೆ ನೀಡುವಲ್ಲಿ ಗಮನಾರ್ಹರಾಗಿದ್ದಾರೆ.