ರಾಂಚಿ: ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸುಳ್ಳುಗಳನ್ನು ಹರಡುವ ಮೂಲಕ ದೇಶದ ಮುಸ್ಲಿಮರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂದು ಮಂಗಳವಾರ ಭರವಸೆ ನೀಡಿದ್ದಾರೆ.
ನಿನ್ನೆ ಜಾಖರ್ಂಡ್ ನ ಭೋಗ್ನಾಡಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೌರತ್ವ ಕಾಯ್ದೆ ದೇಶದ ಯಾವುದೇ ನಾಗರಿಕನ ಪೌರತ್ವದ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಮಾತ್ರ ರಾಜಕೀಯ ಉದ್ದೇಶಗಳಿಗಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಸವಾಲು ಹಾಕುತ್ತೇನೆ, ತಾಕತ್ತಿದ್ದರೆ, ಪಾಕಿಸ್ತಾನದ ಎಲ್ಲಾ ನಾಗರಿಕರಿಗೂ ಭಾರತದ ಪೌರತ್ವ ನೀಡುತ್ತೇವೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೊಳಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಪ್ರಧಾನಿ ಮೋದಿ ಸವಾಲು ಹಾಕಿದ್ದಾರೆ.
ಈ ಗೆರಿಲ್ಲಾ ರಾಜಕೀಯವನ್ನು ನಿಲ್ಲಿಸಿ. ಭಾರತೀಯ ಸಂವಿಧಾನ ನಮ್ಮ ಏಕೈಕ ಪವಿತ್ರ ಪುಸ್ತಕ. ನಮ್ಮ ನೀತಿಗಳನ್ನು ಚರ್ಚಿಸಲು, ಪ್ರಜಾಪ್ರಭುತ್ವವಾಗಿ ಪ್ರತಿಭಟಿಸಲು ಕಾಲೇಜುಗಳಲ್ಲಿನ ಯುವಕರಿಗೆ ನಾನು ಮನವಿ ಮಾಡುತ್ತೇನೆ. ನಾವು ನಿಮ್ಮ ಮಾತನ್ನು ಕೇಳುತ್ತೇವೆ. ಆದರೆ ಕೆಲವು ಪಕ್ಷಗಳು, ನಗರದ ನಕ್ಸಲ್‍ಗಳು ನಿಮ್ಮ ಬಲವನ್ನು ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿದರು.