ತಿರುವನಂತಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಕೇರಳದಲ್ಲಿ ಆಡಳಿತ ಎಡರಂಗ ಮತ್ತು ಪ್ರತಿಪಕ್ಷ ಐಕ್ಯರಂಗ ಒಟ್ಟಾಗಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ದಾಖಲೆ ಬರೆದಿದೆ. ತಿರುವನಂತಪುರದಲ್ಲಿ ಎರಡೂ ರಂಗಗಳ ಮುಖಂಡರು ಪರಸ್ಪರ ಕೈಬೆಸೆದು ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸುವ ಮೂಲಕ ವೈರತ್ವ ಮರೆತು ವೇದಿಕೆ ಹಂಚಿಕೊಂಡಿದ್ದಾರೆ.
ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಸ್ವತ: ಮುಖ್ಯಮಂತ್ರಿಯನ್ನು ಸಂಪರ್ಕಿಸಿ, ಜಂಟಿ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಮುಖ್ಯಮಂತ್ರಿಯೂ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರತಿ ಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ, ಸಚಿವರುಗಳು, ಪ್ರತಿಪಕ್ಷದ ಇತರ ಮುಖಂಡರು ಪಾಲ್ಗೊಂಡಿದ್ದರು. ಎರಡೂ ರಂಗಗಳು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ಅಘೋಷಿತ ಹರತಾಳ:
ಈ ಹಿಂದೆ ಕೇರಳದಲ್ಲಿ ವಾಟ್ಸ್‍ಆಪ್ ಮೂಲಕ ಕರೆನೀಡಿ ಹರತಾಳ ನಡೆಸುವ ಮೂಲಕ ವ್ಯಾಪಕ ಆಕ್ರಮಣ, ದೊಂಬಿಗೆ ಕಾರಣವಾಗಿದ್ದು, ಈ ಬಾರಿಯೂ ಕೇರಳದಲ್ಲಿ ಡಿಸೆಂಬರ್ 17ರಂದು ಇದೇ ರೀತಿಯ ಹರತಾಳ ನಡೆಸಲು ಕೆಲವು ಸಂಘಟನೆಗಳು ಪ್ರಯತ್ನಿಸುತ್ತಿದೆ. ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ನಡೆಸುವ ಪ್ರತಿಭಟನೆಯ ಮರೆಯಲ್ಲಿ ವ್ಯಾಪಕ ಹಿಂಸಾಚಾರಕ್ಕೂ ಕೆಲವು ಸಂಘಟನೆಗಳು ಮುಂದಾಗುವ ಸಾಧ್ಯತೆಯಿರುವುದಾಗಿ ಮಾಹಿತಿಯಿದೆ. ಕಾನೂನುಬಾಹಿರವಾಗಿ ಹರತಾಳದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ ಬೆಹ್ರಾ ತಿಳಿಸಿದ್ದಾರೆ.
ರಾಜ್ಯಪಾಲರ ಎಚ್ಚರಿಕೆ:
ಪೌರತ್ವ ತಿದ್ದುಪಡಿ ಕಾನೂನು ಪಾಲನೆ ಎಲ್ಲ ರಾಜ್ಯಗಳ ಸಂವಿಧಾನಾತ್ಮಕ ಹೊಣೆಯಾಗಿದ್ದು, ಇದನ್ನು ಕೇರಳದಲ್ಲಿ ಜಾರಿಗೊಳಿಸಲಾಗದು ಎಂಬ ಮುಖ್ಯಮಂತ್ರಿ ಹೇಳಿಕೆ ಬಾಲಿಷತನದ್ದಾಗಲಿದೆ. ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಹೆಸರಲ್ಲಿ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿರುವುದಾಗಿ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.