ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಜನ ಸಾಮಾನ್ಯರಿಗೆ ಸರಕಾರದ ಸೌಲಭ್ಯಗಳನ್ನು ಪಡೆಯುವ ಪ್ರಮುಖ ವ್ಯವಸ್ಥೆ ರೇಶನ್ ಅಂಗಡಿಗಳಲ್ಲಿ ದೊರಕುವ ಸಾಮಗ್ರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟರ ತನಕ ದ್ವಿಭಾಷಾ ನೀತಿಯಂತೆ ಮಲಯಾಳ ಹಾಗು ಕನ್ನಡದಲ್ಲಿ ರೇಶನ್ ಕಾರ್ಡ್‍ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಬಾರಿ ಕಾಸರಗೋಡು ತಾಲೂಕು ಸಪ್ಲೈ ಆಫೀಸ್‍ನಲ್ಲಿ ಕನ್ನಡ ಭಾಷಾ ಎಂಟ್ರಿ ಹುದ್ದೆಯನ್ನು ತೆಗೆದು ಹಾಕುವ ಮೂಲಕ ಮಲಯಾಳದಲ್ಲಿ ಮಾತ್ರ ರೇಶನ್ ಕಾರ್ಡ್ ವಿತರಣೆ ಮಾಡುವ ಮೂಲಕ ಕನ್ನಡಿಗರನ್ನು ವಂಚಿಸಲಾಗಿದೆ.
ಈ ಬಗ್ಗೆ ಕನ್ನಡ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಸಪ್ಲೈ ಆಫೀಸರನ್ನು ನಿಯೋಗದ ಮೂಲಕ ಭೇಟಿಯಾಗಿ ಪ್ರಭಟನೆಯನ್ನು ವ್ಯಕ್ತಪಡಿಸಲಾಯಿತು. ಈ ಕುರಿತು ಇಲಾಖೆಯ ನಿರ್ದೇಶಕರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡುವ ಮೂಲಕ ಕನ್ನಡ ಹುದ್ದೆಯನ್ನು ಮರು ನೇಮಕ ಮಾಡುವ ಭರವಸೆಯನ್ನು ನೀಡಿದರು. ಕನ್ನಡ ಹೋರಾಟ ಸಮಿತಿಯ ಮುಖಂಡರಾದ ಭಾಸ್ಕರ ಕಾಸರಗೋಡು, ವಿಶ್ವನಾಥ ರಾವ್, ಗುರುಪ್ರಸಾದ್ ಕೋಟೆಕಣಿ, ಶ್ರೀಕಾಂತ್ ಕಾಸರಗೋಡು, ವಿನೋದ್ ಕುಮಾರ್, ದಯಾನಂದ ಬೆಳ್ಳೂರಡ್ಕ ಮೊದಲಾದವರು ನಿಯೋಗದಲ್ಲಿದ್ದರು.