ನವದೆಹಲಿ: ದೇಶದ ಮೂರು ಸೇನಾಪಡೆಗಳ(ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಂಬುವದಾದರೆ, 62 ವರ್ಷದ ಬಿಪಿನ್ ರಾವತ್ ಅವರು ರಕ್ಷಣಾ ಪಡೆಗಳ ಮುಖ್ಯಸ್ಥ(ಚೀಫ್ ಆಫ್ ಡಿಫೆನ್ಸ್ ಸ್ಟಾಫ್)ರಾಗಿ ನೇಮಕಗೊಂಡಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಹಾಗೂ ಯೋಗಿ ಆದಿತ್ಯನಾಥ್ ಅವರು ನೂತನ ಹುದ್ದೆ ವಹಿಸಿಕೊಂಡ ಬಿಪಿನ್ ರಾವತ್ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಮೂರು ವರ್ಷಗಳ ಸೇವಾವಧಿ ಇಂದು ಪೂರ್ಣಗೊಳಿಸುತ್ತಿದ್ದು, ಅವರು ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಂತೆಯೇ ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಲಾಗಿದೆ.
ಕೇಂದ್ರ ಸರ್ಕಾರ ಸಹ ಬಿಪಿನ್ ರಾವತ್ ಅವರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಮೊನ್ನೆಯಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ಏರಿಸಿತ್ತು. ಆದರೆ ಅವರ ಅಧಿಕಾರವಧಿ ಇನ್ನೂ ನಿಗದಿ ಮಾಡಿಲ್ಲ. ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸೃಷ್ಟಿಸಿದ್ದು, ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ನೀಡಲಾಗಿದೆ.
ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಈ ಹುದ್ದೆ ಸಹಾಯಕವಾಗುವ ನಿರೀಕ್ಷೆ ಇದೆ. ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ.