ಕುಂಬಳೆ: ಶಿಕ್ಷಕರಿಗೂ ಮುಖ್ಯ ಶಿಕ್ಷಕರಿಗೂ ಆಗಾಗ ತರಬೇತಿಗಳನ್ನು ನಡೆಸುವುದು, ಅದರ ಪರಿಣಾಮವಾಗಿ ಶಾಲೆಯಲ್ಲೂ ತರಗತಿಯಲ್ಲೂ ಆಗಿರುವ ಬದಲಾವಣೆಗಳ ಕುರಿತಾದ ಅವಲೋಕನ ಸಭೆಗಳು ನಡೆಯುವುದು ಸಾಮಾನ್ಯವೂ ಹೌದು ಅದು ಅತ್ಯಗತ್ಯವೂ ಹೌದು. ತೈಲವನ್ನು ಆಗಾಗ ಪಡೆಯುತ್ತಿರುವ ದೀಪವು ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತಾ ಪರಿಸರದಲ್ಲೆಲ್ಲ ಶುಭ್ರ ಬೆಳಕನ್ನು ಹರಿಸುತ್ತದೆ. ಅದೇ ರೀತಿ ಮುಖ್ಯ ಶಿಕ್ಷಕರಿಗೆ ಆಗಾಗ ತರಬೇತಿಗಳು ನಡೆದು ಅದು ಎಷ್ಟರ ಮಟ್ಟಿಗೆ ಶಾಲೆಯಲ್ಲಿ ಕಾರ್ಯಗತಗೊಂಡಿದೆ ಎಂದು ಅವಲೋಕನ ಮಾಡುವುದು ಶಾಲಾ ಪರಿಸರವನ್ನು ಅಚ್ಚುಕಟ್ಟುಗೊಳಿಸಿ ಪಠ್ಯ-ಸಹಪಠ್ಯ ಚಟುವಟಿಕೆಗಳು ಪರಿಣಾಮಕಾರಿಯಾಲು ಸಹಾಯಕವಾಗುತ್ತದೆ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಹೇಳಿದರು.
ಅವರು ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲೆಯ ಹಿರಿಯ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಒಂದು ದಿನದ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಇಂತಹ ಕಾರ್ಯಕ್ರಮಗಳು ಸಮಗ್ರ ಶಿಕ್ಷಾ ಕೇರಳ ಯೋಜನೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ತಜ್ಞರ ಸಲಹೆಯ ಮೇರೆಗೆ ಇದೇ ಮೊದಲ ಬಾರಿಗೆ ಶಾಲೆಯೊಂದರಲ್ಲಿ ನಡೆಸಲಾಗುತ್ತಿದೆ. ಅದಕ್ಕಾಗಿ ರಕ್ಷಕ ಶಿಕ್ಷಕ ಸಂಘವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತಿರುವ ಪೇರಾಲು ಶಾಲೆಯನ್ನೇ ಆಯ್ಕೆಮಾಡಲಾಗಿದೆ ಎಂದೂ ಅವರು ಹೇಳಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಯೋಜನಾಧಿಕಾರಿ ಕುಂಞÂಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ಮುಖ್ಯಶಿಕ್ಷಕರ ಸಂಘದ ಸಂಚಾಲಕರಾದ ವಿಷ್ಣುಪಾಲ ಪಂಜಿಕಲ್ಲು, ಕ್ಷೇತ್ರ ಸಂಪನ್ಮೂಲ ಕೇಂದ್ರದ ತರಬೇತುದಾರರಾದ ಶಿವರಾಮ ಕಾಟುಕುಕ್ಕೆ ಹಾಗೂ ಶ್ರೀರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯವೆಸಗಿದರು.