ಕುಂಬಳೆ : ಜಿಲ್ಲೆಯ ಪ್ರಧಾನ ನಗರಗಳ ಪೈಕಿ ಕುಂಬಳೆ ಪೇಟೆ ಅತಿ ವೇಗದಿಂದ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹಿತ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ಸಂಕಷ್ಟಕ್ಕೀಡಾಗಬೇಕಾಗುತ್ತಿದೆ.
ಕುಂಬಳೆ ಪೇಟೆಯಲ್ಲಿ ಓಬಿರಾಯನ ಕಾಲದಲ್ಲಿದ್ದ ಬಸ್ ನಿಲ್ದಾಣದವನ್ನು ಮುರಿದು ಬೀಳುವ ಆತಂಕದ ಕಾರಣ ಸಾರ್ಜವನಿಕರ ಹಿತಾಸಕ್ತಿಯಿಂದ ಗ್ರಾಮ ಪಂಚಾಯತಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಲಾಗಿತ್ತು. ಆದರೆ ಆ ಬಳಿಕ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಸಾಧ್ಯವಾಗದಿರುವುದು ಗ್ರಾಮ ಪಂಚಾಯತಿ ಆಡಳಿತ ಸಮಿತಿಯ ದುರಾಡಳಿತಕ್ಕಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರಿಂದ ಮಾತುಗಳು ಕೇಳಿಬಂದಿದೆ.
ಮಳೆ, ಬಿಸಿಲುಗಳಿಂದ ಜನರ ಸಂಕಷ್ಟಗಳನ್ನು ಮನಗಂಡು ಸ್ಥಳೀಯ ವ್ಯಾಪಾರೀ ಸಂಘಟನೆ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಿ ನೀಡಿದ್ದು ಇದರಿಂದ ಕೇವಲ ಬೆರಳೆಣಿಕೆಯ ಪ್ರಯಾಣಿಕರಿಗೆ ಮಾತ್ರ ಪ್ರಯೋಜನವಾಗುತ್ತಿದೆ.
ಅಗಲಕಿರಿದಾದ ಕುಂಬಳೆಯ ಬಸ್ ನಿಲ್ದಾಣದ ಒಳಗೆ ಬಸ್ ಗಳಿಗೆ ಮಾತ್ರ ಪ್ರವೇಶವಿರುವ ರಸ್ತೆಯಲ್ಲಿ ಇತರೆ ವಾಹನಗಳು ನಿರ್ಭಯದಿಂದ ಸಂಚರಿಸುತ್ತಿದ್ದು, ತಾತ್ಕಾಲಿಕ ಬಸ್ ತಂಗುದಾಣದ ಪಕ್ಕದಲ್ಲಿ ಟ್ರಾಫಿಕ್ ನಿಯಮಗಳಿಗೆ ಹುಲ್ಲುಕಡ್ಡಿಯ ಬೆಲೆ ಮಾತ್ರ ಕಲ್ಪಿಸಿ ವಾಹನ ನಿಲುಗಡೆ ಮಾಡಲಾಗುತ್ತಿರುವುದೂ ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದೆ. ಅತ್ಯಧಿಕ ಪ್ರಯಾಣಿಕರ ದಟ್ಟಣೆಯ ಸಂಜೆಯ ವೇಳೆ ಮಂಗಳೂರು-ಕಾಸರಗೋಡು ಸಂಚರಿಸುವ ಹೆಚ್ಚಿನ ಸರ್ಕಾರಿ ಬಸ್ ಗಳು ಬಸ್ ನಿಲ್ದಾಣಕ್ಕೆ ಆಗಮಿಸದೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರಯಾಣಿಕರನ್ನು ಒತ್ತಾಯಪೂರ್ವಕವಾಗಿ ಇಳಿಸುತ್ತಿರುವ ಬಗ್ಗೆ ಕಾನೂನು ಪಾಲಕರಿಗೆ ಅರಿವಿದ್ದು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬದಿಯಡ್ಕ ಮುಳ್ಳೇರಿಯಾ, ಪೆರ್ಲ, ಪೇರಾಲುಕಣ್ಣೂರು ಭಾಗಗಳಿಗೆ ತೆರಳುವ ಬಸ್ ಗಳಿಗೆ ನಿಲ್ದಾಣವಿಲ್ಲದೆ ಬದಿಯಡ್ಕ ರಸ್ತೆಯ ಇಕ್ಕೆಲಗಳನ್ನು ಅತಿಕ್ರಮಿಸಿ ರಸ್ತೆ ಸಂಚಾರ, ಇತರ ವಾಹನಗಳ ನಿಲುಗಡೆಗಳಿಗೆ ತೊಂದರೆಗಳುಂಟಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಇಲ್ಲಿ ಗ್ರಾಮ ಪಂಚಾಯತಿ ಸಮಿತಿಯು ತಾತ್ಕಾಲಿಕ ಬಸ್ ತಂಗುದಾಣವನ್ನಾಗಿಸಲು ಬಸ್ ಸಿಬ್ಬಂದಿಗಳಿಗೆ ಸೂಚಿಸಿ ವರ್ಷಗಳೇ ಕಳೆದಿದೆ.
ಕೇರಳ ಸರ್ಕಾರದ ಕಳೆದ ಸಾಲಿನ (2018-19) ವಾರ್ಷಿಕ ಮುಂಗಡ ಪತ್ರದಲ್ಲಿ ಮಂಜೂರುಗೊಂಡ ಒಟ್ಟುಮೊತ್ತದ ಶೇ.50 ಕ್ಕಿಂತ ಹೆಚ್ಚು ಮೊತ್ತವನ್ನು ಉಪಯೋಗಿಸದೆ, ಮಂಜೂರುಗೊಂಡ ಮೊತ್ತವನ್ನು ರಾಜ್ಯ ಸರ್ಕಾರದ ಖಜಾನೆಗೆ ಮರಳಿಸಿರುವುದು ಗ್ರಾ.ಪಂ.ಆಡಳಿತ ಶೈಲಿಯ ಸೂಚನೆ ಎಂದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಭಿವೃದ್ದಿ ಚಟುವಟಿಕೆ ನಡೆಸಲು ಅನುದಾನದ ಕೊರತೆ ಇರುವುದಲ್ಲ;ಇಚ್ಚಾಶಕ್ತಿಯ ಕೊರತೆ ಮಾತ್ರ ಇಲ್ಲಿದೆ ಎಂದು ಪ್ರಜ್ಞಾವಂತರ ಅಂಬೋಣ.
ಕೇರಳದ ಒಟ್ಟು 941 ಗ್ರಾಮ ಪಂಚಾಯತಿಗಳ ಪೈಕಿ ಕನಿಷ್ಠ (941)ನೇ ಸ್ಥಾನ ಗಳಿಸಿದ ಕುಂಬಳೆ ಗ್ರಾಮ ಪಂಚಾಯತಿ ಪ್ರಸ್ತುತ ಆಡಳಿತ ಸಮಿತಿಯ ಕಾಲಾವಧಿ ಮುಗಿಯಲು ಇನ್ನು ಬಾಕಿ ಉಳಿದಿರುವುದು ಕೇವಲ 10 ತಿಂಗಳು ಮಾತ್ರ ಮತ್ತು 1963 ರಿಂದ ನಿರಂತರ 51 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಸ್ಲಿಂ ಲೀಗ್ ಪಕ್ಷದಿಂದ ಗ್ರಾಮ ಪಂಚಾಯತಿಯ ಜನತೆಗೆ ಹೆಚ್ಚೇನೂ ನಿರೀಕ್ಸಿಸಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪ್ರವಾಸೋದ್ಯಮ ಬೆಳವಣಿಗೆಗೆ ಉದ್ದೇಶಿಸಲಾಗಿದ್ದ ಕುಂಬಳಾಂಗಿ ಯೋಜನೆ, ಯಕ್ಷಪಿತಾಮಹ ಪಾರ್ತಿಸುಬ್ಬನಿಗೊಂದು ಸ್ಮಾರಕ, ಕಡಲ ತೀರದ ಮೀನುಗಾರರ ಸಂರಕ್ಷಣೆ-ಅಭಿವೃದ್ದಿಗೆ ಬಹುಮುಖ ಯೋಜನೆ, ಕೃಷಿ ಕ್ಷೇತ್ರದ ಉಜ್ಜೀವನಕ್ಕೆ ನಿರಂತರ ಹರಿಯುವ ಕುಂಬಳೆ, ಸೀರೆ ಹೊಳೆಗಳನ್ನು ಸಮರ್ಪಕವಾಗಿ ಬಳಸಿ ವಿವಿಧ ಯೋಜನೆಗಳು ಮೊದಲಾದ ಹತ್ತು ಹಲವು ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಅವಕಾಶಗಳಿದ್ದರೂ ಸಂಬಂಧಪಟ್ಟವರು ಮುಂದಾಗದಿರುವುದು ಕುಂಬಳೆಗೆ ಒದಗಿರುವ ಶಾಪವೆಂದೇ ಜನರು ನಿರಾಶರಾಗುತ್ತಿದ್ದಾರೆ.
ಅಭಿಮತ ಕೇಳಿ:
ಕುಂಬಳೆಯಲ್ಲಿ ಸುಸಜ್ಜಿತ ಬಸ್ ತಂಗುತಾಣ ನಿರ್ಮಾಣಕ್ಕೆ 5 ಕೋಟಿ ರೂ.ಗಳ ಯೋಜನೆಗೆ ಆಡಳಿತಾನುಮತಿ ಲಭ್ಯವಾಗಿದ್ದು, ಜನವರಿಯಲ್ಲಿ ಶಂಕುಸ್ಥಾಪನೆ ನಿರ್ವಹಿಸಲು ಚಿಂತಿಸಲಾಗುತ್ತಿದೆ. ಅಲ್ಲದೆ ಪೇಟೆಯಿಂದ ಅನತಿ ದೂರದಲ್ಲಿ ಖಾಸಗೀ ವ್ಯಕ್ತಿಗಳಿಂದ ನಿವೇಶನ ಖರೀಧಿಸಿ ಬೃಹತ್ ಬಸ್ ನಿಲ್ದಾಣವೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಒಂದೆರಡು ವರ್ಷಗಳಲ್ಲಿ ಅನುಷ್ಠಾನಗೊಳ್ಳಬಹುದಾಗಿದೆ.
ಪುಂಡರೀಕಾಕ್ಷ ಕೆ.ಎಲ್.
ಅಧ್ಯಕ್ಷರು.ಕುಂಬಳೆ ಗ್ರಾ.ಪಂ.
..................................................................................................................................................................
ಕುಂಬಳೆಯ ಬಸ್ ನಿಲ್ಧಾಣದ ಅಸುರಕ್ಷಿತವೆಂದು ಗ್ರಾ.ಪಂ. ಅಧಿಕೃತರು ಕಳೆದ ಎರಡು ವರ್ಷಗಳ ಹಿಂದೆ ಅಲ್ಲಿ 45 ವರ್ಷಗಳಿಗಿಂತಲೂ ಹೆಚ್ಚು ಕಾಲಗಳಿಂದ ವ್ಯಾಪಾರ ನಡೆಸುತ್ತಿದ್ದ 38 ವ್ಯಾಪಾರಿ ಅಂಗಡಿಗಳನ್ನು ತೆರವುಗೊಳಿಸಿ ನಿಲ್ದಾಣವನ್ನು ಕೆಡವಿತ್ತು. ಅಂದಿಂದ ಈವರೆಗೂ ಅಲ್ಲಿದ್ದ 38 ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಜೊತೆಗೆ ವ್ಯಾಪಾರಿಗಳು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿದ ದಾವೆಯ ಕಾರಣ ಉಚ್ಚ ನ್ಯಾಯಾಲಯವು ಮುಂದೆ ಬಸ್ ನಿಲ್ದಾಣ-ವ್ಯಾಪಾರ ಸಂಕೀರ್ಣ ನಿರ್ಮಿಸುವಾಗ ಹಳೆಯ ವ್ಯಾಪಾರಿಗಳಿಗೆ ಮೊದಲ ಆದ್ಯತೆ ನೀಡಿ 30 ಶೇ. ಕಡಿಮೆ ಬಾಡಿಗೆ ವಸೂಲು ಮಾಡುವಂತೆ ತೀರ್ಪು ನೀಡಿದೆ. ಆದರೆ ಇದೀಗ ಕೆಡವಲಾದ ಬಸ್ ನಿಲ್ದಾಣವಿರುವಲ್ಲಿ ಬೀದಿ ಬದಿ ವ್ಯಾಪಾರಿಗಳು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದು, ನೈರ್ಮಲ್ಯ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಪ್ರವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಬೀದಿ ವ್ಯಾಪಾರಿಗಳನ್ನು ಶೀಘ್ರ ತೆರವುಗೊಳಿಸಿ ಬಸ್ ನಿಲ್ದಾಣ-ವ್ಯಾಪಾರ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಪೂರೈಸಿ ಶೀಘ್ರ ಪ್ರಯಾಣಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸುಲಲಿತ ವ್ಯವಸ್ಥೆಗೆ ಮುಂದಾಗಬೇಕು.
ವಿಕ್ರಂ ಪೈ.ಕುಂಬಳೆ
ಅಧ್ಯಕ್ಷರು.ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ.ಕುಂಬಳೆ ಘಟಕ.