ಕುಂಬಳೆ: ಕಲೆಗಳು ಕೇವಲ ಮನೋರಂಜನೆಗಷ್ಟೇ ಇರುವುದಲ್ಲ. ಮನೋರಂಜನೆಯ ಮರೆಯಲ್ಲಿ ಅದು ಚಿತ್ತ ಮತ್ತು ಭಾವ ಪ್ರಚೋದಕವಾಗಿ ಪ್ರೇಕ್ಷಕರನ್ನು ಬೌದ್ಧಿಕವಾಗಿ ಎತ್ತರಿಸುವ ಸಾಮಾಜಿಕ ಬದ್ಧತೆ ಹೊಂದಿದೆ. ಈ ಗುರಿ ಸಫಲವಾಗಬೇಕಿದ್ದರೆ ರಂಗದಲ್ಲಿರುವ ಕಲಾವಿದರು ಕಲೆಯನ್ನು ಒಂದು ವೃತ್ತಿಯಾಗಿ ಕಾಣದೇ ಅದನ್ನು ಆರಾಧಿಸಿ ಅನುಭವಿಸಬೇಕು. ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಕಥಾಕಥನಗಳ ಅನುಸಂಧಾನ ನಡೆಯಬೇಕು. ಉತ್ತಮ ಪ್ರೇಕ್ಷಕರ ಮೂಲಕ ಉತ್ತಮ ಕಲಾವಿದರು ಮತ್ತು ಉತ್ತಮ ಕಲಾವಿದರಿಂದಲೇ ಉತ್ತಮ ಪ್ರೇಕ್ಷಕ ವರ್ಗವೂ ಸೃಷ್ಟಿಯಾಗುತ್ತದೆ ಎಂದು ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನಸಂಪಾದಕ, ಲೇಖಕ ಎಂ.ನಾ ಚಂಬಲ್ತಿಮಾರ್ ನುಡಿದರು.
ಕಾರ್ಕಳ ತಾಲೂಕಿನ ಸೂಡ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಪ್ರಯುಕ್ತ ಸೂಡ ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾದ ಯಕ್ಷೋತ್ಸವ ಸಪ್ತಾಹ ಯಕ್ಷನಮನ-ಭಾವವಂದನ-ಭಾವನಮನ-ಸಂಸ್ಮರಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾವನಮನಗೈದು ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಯಕ್ಷಗಾನ ಸಂಘಟಕ, ಜಾನಪದ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ಉದ್ಘಾಟಿಸಿದರು. ಈ ಸಂದರ್ಭ ಪ್ರಸಿದ್ಧ ಹಾಸ್ಯಗಾರ, ಸವ್ಯಸಾಚಿ ಯಕ್ಷಗಾನ ಕಲಾವಿದ ಸುರೇಶ್ ಕೊಲೆಕಾಡಿ ಅವರಿಗೆ ಸ್ಕಂದ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಕಲಾವಿದ ಸುರೇಶ್ ಕೊಲೆಕಾಡಿ ಮಾತನಾಡಿ ಪುರಸ್ಕಾರಗಳು ಮುನ್ನಡೆಯ ಹಾದಿಗೆ ಪ್ರಚೋದಕ ಮತ್ತು ಅಂಗೀಕರಿಸುವ ಸದ್ಗುಣದ ಧ್ಯೋತಕ ಎಂದರು.
ಉದ್ಯಮಿ ರಂಗಭೂಮಿ ಕಲಾವಿದ ಶಿರ್ವಕೋಡು ಮನೋಹರ ಶೆಟ್ಟಿ, ಶಿರ್ವಕೋಡು ವಿಜಯ್ ಭರತ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೂಡ ಕ್ಷೇತ್ರದ ಆಡಳಿತ ಮೊಕ್ತೇಸರ ಶಿರ್ವಕೋಡು ಜಯಶೀಲ ಹೆಗ್ಡೆ ಸಪ್ತಾಹಕ್ಕೆ ಮತ್ತು ಮೇಳಕ್ಕೆ ಶೂಭಹಾರೈಸಿದರು. ಮೇಳದ ಸಂಚಾಲಕ ಹರೀಶ್ ಶೆಟ್ಟಿ ಸೂಡ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಅಧ್ಯಾಪಕ ರಮೇಶ್ ಶಾಸ್ತ್ರಿ ಕೆ.ಎಸ್.ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ರಿತೇಶ್ ಶೆಟ್ಟಿ ವಂದಿಸಿದರು.