ದೆಹಲಿ: ದೇಶಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. ಕೇಂದ್ರ ಸರ್ಕಾರದ ವಿರುದ್ಧ ಹೊತ್ತಿಕೊಂಡ ಕಿಚ್ಚು ರಾಷ್ಟ್ರ ರಾಜಧಾನಿಯಾದ್ಯಂತ ವ್ಯಾಪಿಸಿದೆ. ಪಾಕಿಸ್ತಾನ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್ ದಿಂದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಭಾರತೀಯ ಪೌರತ್ವ ನೀಡಲು ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಧರ್ಮದ ಆಧಾರದ ಮೇಲೆ ಜಾರಿಗೊಳಿಸಲಾಗಿದೆ ಎನ್ನಲಾದ ಪೌರತ್ವ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ಕೋಪದ ಕಿಚ್ಚಿಗೆ ಬಸ್ ಸುಟ್ಟು ಭಸ್ಮವಾಗಿದೆ.
ದೆಹಲಿ ದಕ್ಷಿಣ ಭಾಗದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಿನ್ನೆ ನಡೆಸಿದ್ದ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಕೆಲವು ಉದ್ರಿಕ್ತರ ಗುಂಪು ಬಸ್ ಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ದೆಹಲಿ ಸಾರಿಗೆ ಬಸ್ ಗೆ ಬೆಂಕಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಹೋಗುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಸುಖದೇವ್ ವಿಹಾರ್ ಸ್ಟೇಷನ್, ಓಖ್ಲಾ ವಿಹಾರ್, ಜಾಸೋಲಾ ವಿಹಾರ್ ಶಾಹೀನ್ ಬಾಗ್ ಹಾಗೂ ಆಶ್ರಮ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ದೆಹಲಿ ಸಾರಿಗೆ ಸಂಸ್ಥೆಯ ಬಸ್ ವೊಂದಕ್ಕೆ ಬೆಂಕಿ ಹಚ್ಚಿದ್ದು, ಇಡೀ ಬಸ್ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಯವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.