ಕೋಲ್ಕತಾ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಶನಿವಾರ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕನಿಷ್ಠ ಎರಡು ರೈಲು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮುರ್ಷಿದಾಬಾದ್ ಜಿಲ್ಲೆಯ ಕೃಷ್ಣಪುರ ರೈಲ್ವೆ ನಿಲ್ದಾಣದಲ್ಲಿ ಒಂದು ರೈಲಿಗೆ ಹಾಗೂ ಲಾಲ್ ಗೋಲ ರೈಲ್ವೆ ನಿಲ್ದಾಣದಲ್ಲಿ ಮತ್ತೊಂದು ರೈಲಿಗೆ ಬೆಂಕಿ ಹಚ್ಚಲಾಗಿದ್ದು, ಎರಡೂ ರೈಲುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.ಬೆಳಗ್ಗೆ ಹೌರಾ ಜಿಲ್ಲೆಯ ಸಂಕ್ರೇಲ್ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ರೈಲು ನಿಲ್ದಾಣ ಭಾಗಶಃ ಸುಟ್ಟುಹೋಗಿದೆ. ಅಲ್ಲದೆ ಪ್ರತಿಭಟನಕಾರರು ರೈಲು ನಿಲ್ದಾಣದಲ್ಲಿದ್ದ ಫಲಕಗಳು, ಕಾಂಕ್ರೀಟ್ ಬೆಂಚುಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಬಂದ ರೈಲ್ವೆ ಪೆÇಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ರೈಲು ತಡೆ ನಡೆಸಲಾಗಿದೆ. ಹೀಗಾಗಿ ಬೆಳಿಗ್ಗೆ 11ರಿಂದ ಮಧ್ಯಾಹ್ನ ನಾಲ್ಕರವರೆಗೆ ರೈಲು ಸಂಚಾರ ಸ್ಥಗಿತವಾಗಿತ್ತು.ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಜನರು ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಕರೆಕೊಟ್ಟರು. ಆದರೆ, ಮಧ್ಯಾಹ್ನದ ನಂತರ ಪ್ರತಿಭಟನೆ ಮತ್ತಷ್ಟು ತೀವ್ರವಾಯಿತು. ಮುಂಬೈ ಕೋಲ್ಕತ್ತ ಹೆದ್ದಾರಿ ಮತ್ತು ಮುಂಬೈ ದೆಹಲಿ ಹೆದ್ದಾರಿ ಮಧ್ಯೆ ಸಂಪರ್ಕ ಕಲ್ಪಿಸುವ ಕೋನಾ ಎಕ್ಸ್‍ಪ್ರೆಸ್ ಹೆದ್ದಾರಿಗೆ ಇಳಿದ ಪ್ರತಿಭಟನಕಾರರು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ನಾಲ್ಕು ಸಾರಿಗೆ ಸಂಸ್ಥೆ ಬಸ್ ಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಪ್ರತಿಭಟನಕಾರರನ್ನು ಚದುರಿಸಲು ಪೆÇಲೀಸರು ಮುಂದಾದರು. ಆಗ ಕಲ್ಲು ತೂರಾಟ ನಡೆಯಿತು. ಪೆÇಲೀಸರು ಅಶ್ರುವಾಯು ಷೆಲ್ ಸಿಡಿಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಹೆದ್ದಾರಿಯಲ್ಲಿ ನಿಂತಿದ್ದ ಬಸ್‍ಗಳಿಗೆ ಬೆಂಕಿ ಹಚ್ಚಿದರು.
ನಂತರ ಜಿಲ್ಲಾ ಕೇಂದ್ರವನ್ನು ತಲುಪಿದ ಪ್ರತಿಭಟನಕಾರರು, ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಜಿಲ್ಲೆಯ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಟೈರ್ ಸುಟ್ಟು, ಸಂಚಾರಕ್ಕೆ ತಡೆ ಒಡ್ಡಲಾಗಿದೆ.