ಪೆರ್ಲ: ಹಕ್ಕು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆಯಲ್ಲ. ಕರ್ತವ್ಯಗಳನ್ನು ಪಾಲಿಸಿದರೆ ಹಕ್ಕುಗಳನ್ನು ಕೇಳಿ ಪಡೆಯುವ ಅಧಿಕಾರ ಪ್ರತಿಯೊಬ್ಬನಿಗೂ ಇರುತ್ತದೆ ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಬುಧವಾರ ನಡೆದ ಮಾನವ ಹಕ್ಕು ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಶಿಸ್ತುಬದ್ಧ ಹಾಗೂ ಶಾಂತಿಯುತ ಜೀವನ ನಡೆಸಲು ಸಾರ್ವಜನಿಕ ವಲಯದಲ್ಲಿ ಕಾನೂನು ಅರಿವಿನ ಅಗತ್ಯ ಇದೆ. ಆದುದರಿಂದ ಪ್ರತಿಯೊಬ್ಬನಿಗೂ ಹಕ್ಕು ಮತ್ತು ಕರ್ತವ್ಯಗಳ ಅರಿವಿರಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದರ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಿ, ಪರಸ್ಪರ ಗೌರವಿಸುತ್ತಾ ಮುನ್ನಡೆಯಬೇಕು. ಹಕ್ಕುಗಳ ಉಲ್ಲಂಘನೆಯಾದಾಗ ಸರ್ಕಾರ ಅಥವಾ ನ್ಯಾಯಾಂಗದ ಗಮನಕ್ಕೆ ತರಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಭಿಲಾಶ್ ಉಪಸ್ಥಿತರಿದ್ದರು. ಸುಪ್ರೀತ ಸ್ವಾಗತಿಸಿ, ಅಂಜನಾ ವಂದಿಸಿದರು. ಕವಿತಾ ನಿರೂಪಿಸಿದರು.