ಉಡುಪಿ: ಪೇಜಾವರ ಶ್ರೀ ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು ಅವರ ಕಾರು ಚಾಲಕ ಮುಹಮ್ಮದ್ ಆರಿಫ್ ಹೇಳಿದ್ದಾರೆ.
ಹಿಂದೂ ಧರ್ಮದ ಪರಿಚಾರಕರಾಗಿದ್ದ ಪೇಜಾವರ ಶ್ರೀಗಳ ಕಾರು ಚಾಲಕ ಓರ್ವ ಮುಸ್ಲಿಂ ಯುವಕನಾಗಿದ್ದ ಎಂದು ಹೇಳಿದರೆ ಹೆಚ್ಚಿನವರು ನಂಬಲಾರರು. ಆದರೂ ಇದು ಸತ್ಯ. ಉಡುಪಿ ಶ್ರೀ ಕೃಷ್ಣ ಮಠದ ಹಿರಿಯ ಯತಿಶ್ರೀ ವಿಶ್ವೇಶ ತೀರ್ಥ ಶ್ರೀಗಳ ಕಾರು ಚಾಲಕನಾಗಿ ಮುಹಮ್ಮದ್ ಆರಿಫ್ ಎಂಬ ಮುಸ್ಲಿಂ ಯುವಕ ಕೆಲಸ ನಿರ್ವಹಿಸುತ್ತಿದ್ದ.
ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರಿನ ಚಾಲಕರಾಗಿದ್ದರು. ವಿಶೇಷವೆಂದರೆ, ಮಹಮ್ಮದ್ ಆರೀಫ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಶ್ರೀ ಕೃಷ್ಣ ಮಠದಲ್ಲಿ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಯಾವುದೇ ಟೀಕೆಗಳು ಎದುರಾದಾಗಲೂ ಶ್ರೀಗಳು ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಅವೆಲ್ಲವನ್ನೂ ಎದುರಿಸಿ ನಡೆದಿದ್ದರು.ಇದೀಗ ಶ್ರೀಗಳು ಕೃಷ್ಣೈಕ್ಯ ಹಿನ್ನೆಲೆಯಲ್ಲಿ, ಕಾರು ಚಾಲಕ, ಮುಸ್ಲಿಂ ಯುವಕ ಆರಿಫ್ ಭಾವುಕರಾಗಿದ್ದಾರೆ. “ನಾನು ಕಳೆದ ನಾಲ್ಕು ವರ್ಷದಿಂದ ಶ್ರೀಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಶ್ರೀಗಳು ನನ್ನ ಪಾಲಿಗೆ ಶ್ರೀ ಕೃಷ್ಣನಂತೆ ಕಾಣುತ್ತಿದ್ದರು. ನನ್ನ ಕುಟುಂಬದ ಜೊತೆ ಆಪ್ತ ಬಾಂಧವ್ಯವೂ ಅವರಿಗಿತ್ತು. ಮುಸ್ಲಿಮರು ಎಂದು ಭೇದಭಾವ ಮಾಡಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.
ಈಡೇರದ ಕೊನೆಯಾಸೆ:!
ಕೃಷ್ಣೈಕ್ಯರಾಗುವ ಮುನ್ನ ಶ್ರೀಗಳು ತಮ್ಮ ಚಾಲಕ ಆರಿಫ್ ಗೆ ಮಾತು ನೀಡಿದ್ದರಂತೆ. ಆದರೆ ಆ ಮಾತು ಕೊನೆಗೂ ಈಡೇರಿಲ್ಲ ಎಂದು ಆರಿಫ್ ಹೇಳಿದ್ದಾರೆ. ಇಷ್ಟಕ್ಕೂ ಆ ಮಾತು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಆರಿಫ್, ಶ್ರೀಗಳ 90ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಕ್ಕೆ ಆಹ್ವಾನ ನೀಡಲು ಹೋಗಿದ್ದೆವು. ಆಹ್ವಾನ ಸ್ವೀಕರಿಸಿದ ಪೇಜಾವರ ಶ್ರೀಗಳು ಈ ಬಾರಿಯ ರಕ್ತದಾನ ಶಿಬಿರಕ್ಕೆ ಬಂದೇ ಬರುತ್ತೇನೆ, ನಾನೇ ಉದ್ಘಾಟನೆ ಮಾಡುತ್ತೇನೆ. ನನ್ನ ಹುಟ್ಟುಹಬ್ಬವನ್ನು ನೀವು ಆಚರಿಸಿದ್ರೆ ಬಾರದೇ ಇರುತ್ತೇನಾ. ಎಲ್ಲೇ ಇದ್ದರೂ ಬಂದೇ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಶ್ರೀಗಳು ಈಗ ಈ ಮಾತು ಮರೆತು ಮೌನವಾಗಿದ್ದಾರೆ ಎಂದು ಹೇಳಿದ್ದಾರೆ.