ತಿರುವನಂತಪುರ: ಪಶ್ಚಿಮಬಂಗಾಳದ ನಕಲಿ ವಿಳಾಸದೊಂದಿಗೆ ಕೇರಳಕ್ಕೆ ಆಗಮಿಸಿ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದ ಏಳು ಮಂದಿ ಬಾಂಗ್ಲಾ ನಿವಾಸಿಗಳನ್ನು ಗಡೀಪಾರುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಏಳೂ ಮಂದಿ ಬಾಂಗ್ಲಾದೇಶೀಯರಲ್ಲಿ ಪಾಸ್‍ಪೋರ್ಟ್, ವಿಸಾ ಹೊಂದಿರದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಿ ತಿರುವನಂತಪುರದ ವಿಯೂರ್ ಕೇಂದ್ರಕಾರಾಗೃಹದಲ್ಲಿರಿಸಲಾಗಿತ್ತು. ಪ್ರಸಕ್ತ ಶಿಕ್ಷಾ ಕಾಲಾವಧಿ ಪೂರೈಕೆಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದನ್ವಯ ಇವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶದ ರಾಯಭಾರಿ ಕಚೇರಿ ಅಧಿಕಾರಿಗಳು ಕೇಂದ್ರಕಾರಾಗೃಹಕ್ಕೆ ಆಗಮಿಸಿ, ಇವರೆಲ್ಲರೂ ಬಾಂಗ್ಲಾ ನಿವಾಸಿಗಳೆಂದು ಖಚಿತಪಡಿಸಿದ್ದರು. ಇವರನ್ನು ಭಾರತ-ಬಾಂಗ್ಲಾ ದೇಶದ ಗಡಿ ಭಾಗಕ್ಕೆ ಕರೆದೊಯ್ದು, ಅಲ್ಲಿ ಗಡಿಭದ್ರತಾ ಪಡೆಯ ಅಧಿಕಾರಿಗಳು, ಬಾಂಗ್ಲಾದೇಶದ ಗಡಿಭದ್ರತಾ ಪಡೆ ಬಾಂಗ್ಲಾದೇಶ್ ರೈಫಲ್ಸ್‍ಗೆ ಹಸ್ತಾಂತರಿಸಲಾಗುವುದು.
ಕೇರಳದಲ್ಲಿ ತುಂಬಿಕೊಂಡಿರುವ ವಿದೇಶೀಯರು:
ಕೆಲಸದ ನೆಪದಲ್ಲಿ ಕೇರಳದಲ್ಲಿ ಭಾರಿ ಪರಮಾಣದಲ್ಲಿ ವಿದೇಶೀಯರು ತುಂಬಿಕೊಂಡಿರುವುದಾಗಿ ಮಾಹಿತಿಯಿದೆ. ಈಗಾಗಲೇ ನಡೆಸಿರುವ ಕಾರ್ಯಾಚರಣೆಯನ್ವಯ ಕೇರಳದ ವಿವಿಧ ಜೈಲುಗಳಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದ 35ಮಂದಿ ಪ್ರಜೆಗಳು ಬಂಧನದಲ್ಲಿದ್ದಾರೆ.ಪಶ್ಚಿಮ ಬಂಗಾಳದವರೆಂದು ನಂಬಿಸಿ, ಇಲ್ಲಿ ನಾನಾ ಸಂಸ್ಥೆಯಲ್ಲಿ ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇರಳದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಇವರ ಕೈವಾಡವಿರುವುದೂ ಸಾಬೀತಾಗಿತ್ತು. ಕೇರಳದ ನಾನಾ ಜಿಲ್ಲೆಗಳಲ್ಲಿ ಹಲವಾರು ಮಂದಿ ವಿದೇಶಿ ಪ್ರಜೆಗಳು ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ಗುಪ್ಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಸಿಎಎ ಜಾರಿ ಹಾಗೂ ಎನ್‍ಆರ್‍ಸಿ ಜಾರಿಗೊಳಿಸುವ ಸಿದ್ಧತೆ ಮಧ್ಯೆ ಕೇರಳದಲ್ಲಿ ಅನಧಿಕೃತವಾಗಿ ಸೇರಿಕೊಂಡಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.