ಕುಂಬಳೆ: ಮನುಕುಲದ ಅಳಿವು ಉಳಿವು ಗುಡ್ಡ ಬೆಟ್ಟ ಕಾಡಿನ ಮೇಲೆ ಅವಲಂಬಿಸಿದೆ. ಇವುಗಳ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಇಂದು ನಾವು ಅನುಭವಿಸುವ ಹಾವಾಮಾನ ಬದಲಾವಣೆಗೆ ಕಾಡು ಬೆಟ್ಟಗಳ ನಾಶವೂ ಒಂದು ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಅನಗತ್ಯ ನಿರ್ಮಾಣಗಳಲ್ಲಿ ನಾವಿಂದು ತೊಡಗಿಸಿಕೊಂಡಿದ್ದೇವೆ. ಇದರಿಂದ ಜೈವ ವೈವಿಧ್ಯತೆ ನಾಶವಾಗಿದೆ. ಮನುಕುಲವು ಹೇಳ ಹೆಸರಿಲ್ಲದ ರೋಗ ರುಜಿನಗಳಲ್ಲಿ ನರಳುತ್ತಿದೆ ಎಂದು ಭಾರತೀಯ ಸೈನ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಸಿದ್ಧ ಪರಿಸರ ಹೋರಾಟಗಾರರಾದ ಭಾಸ್ಕರನ್ ವೆಲ್ಲೂರು ಹೇಳಿದರು.
ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಅರಣ್ಯ ಸಂಘದ ಸದಸ್ಯರಿಗಾಗಿ ಕೇರಳ ವನ ಮತ್ತು ವನ್ಯ ಜೀವಿ ಇಲಾಖೆಯು ಭಾನುವಾರ ನಡೆಸಿಕೊಟ್ಟ ಏಕದಿನ ಪ್ರಕೃತಿ ಅಧ್ಯಯನ ಶಿಬಿರದಲ್ಲಿ ಅವರು ಮಕ್ಕಳಿಗೆ ತರಗತಿಯನ್ನು ನಡೆಸಿಕೊಟ್ಟು ಮಾತನಾಡಿದರು.
ಕಾಸರಗೋಡಿನ ಊಟಿ ಎಂದು ಹೆಸರುವಾಸಿಯಾದ ರಾಣಿಪುರಂ ಪರ್ವತ ಸಾಲಿನ ಬೆಟ್ಟ, ಹುಲ್ಲುಗಾವಲು ಹಾಗೂ ಮಳೆಕಾಡಿನಲ್ಲಿ ವಿದ್ಯಾರ್ಥಿಗಳು ನಡೆದಾಡಿದರು. ನೀರಿನ ಉಳಿತಾಯ, ಶುದ್ಧ ನೀರಿನ ಲೆಕ್ಕಾಚಾರ, ವಾಲ್ಮೀಕಿಯಂತಹ ಮುನಿವರ್ಯರು ಕಾಡಿನಲ್ಲಿ ವಾಸಿಸಲಿರುವ ಕಾರಣಗಳು, ಶುದ್ಧ ಗಾಳಿಯ ಇರುವಿಕೆ ಹಾಗೂ ವಿವಿಧ ಸಸ್ಯ ಸಂಪತ್ತಿನ ಬಗ್ಗೆ ಶಿಬಿರದಲ್ಲಿ ಚರ್ಚಿಸಲಾಯಿತು.
ವಿದ್ಯಾರ್ಥಿಗಳಾದ ವಾಸ್ತವಿ ಮತ್ತು ವೆಷ್ಣವಿ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಉತ್ತಮ ಅಭಿಪ್ರಾಯಗಳೊಂದಿಗೆ ಜೀವ ಜಗತ್ತಿನ ಕುರಿತು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ ಆರನೇ ತರಗತಿಯ ಮಹೇಶ್ವರನನ್ನು ಅಧಿಕೃತರು ಶಿಬಿರದ ವಿಶೇಷ ವಿದ್ಯಾರ್ಥಿಯನ್ನಾಗಿ ಆರಿಸಿ ಅಭಿನಂದಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳಾದ ಚಂದ್ರನ್, ಮುರಳಿ ಹಾಗೂ ಕೆ.ಸುರೇಶ್ ಮಾರ್ಗದರ್ಶನ ನೀಡಿದರು. ಅಧ್ಯಾಪಕರಾದ ಅರುಣ್, ಮೇರಿ, ಸೋಫಿ, ಜಯಶೀಲ, ಶೆರ್ಲಿ ಹಾಗೂ ಸಿಸ್ಟರ್ ಆಶಾ ಸಹಕರಿಸಿದರು. ರಾಜು ಕಿದೂರು ವಂದಿಸಿದರು.