ಕಾಸರಗೋಡು: ಎಲ್ಲ ರಂಗಗಳಲ್ಲೂ ಕಾಸರಗೋಡುಜಿಲ್ಲೆ ಅವಗಣನೆಗೆ ಸಾಕ್ಷಿಯಾಗುತ್ತಿದ್ದು, ಆರೋಗ್ಯ ರಂಗದಲ್ಲೂ ಇದನ್ನು ಸರ್ಕಾರ ಮುಂದುವರಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೂವರು ಪ್ರಮುಖ ವೈದ್ಯರನ್ನು ಸರ್ಕಾರ ಇಲ್ಲಿಂದ ವರ್ಗಾಯಿಸಿದ್ದು, ಬದಲಿ ವೈದ್ಯರ ನೇಮಕಾತಿ ನಡೆಸದೆ, ಇಲ್ಲಿನ ಜನತೆಗೆ ವಂಚಿಸಿದೆ.
ಅರ್ಬುದರೋಗ ತಜ್ಞ ಡಾ. ಬಿಜು ಅವರನ್ನು ಪಾಲಕ್ಕಾಡಿಗೆ, ದಂತ ತಜ್ಞ ಡಾ. ಧನ್ಯಾ ಅವರನ್ನು ನೆಯ್ಯಾಟಿಂಗರ ಹಾಗೂ ಸಿವಿಲ್‍ಸರ್ಜನ್ ಡಾ. ನಿಖಿಲ್ ಅವರನ್ನು ಚಿರಯಂಕಿಲ್‍ಗೆ ವರ್ಗಾಯಿಸಲಾಗಿದೆ. ಆಸ್ಪತ್ರೆಯಲ್ಲಿ ಈ ಹಿಂದೆ ಚರ್ಮರೋಗ ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಡಾ.ದೀಪಾಮೇರಿ ಅವರನ್ನು ಮರು ನೇಮಕ ಮಾಡಲಾಗಿದೆ. ಈ ಹಿಂದೆ ದೀಪಾಮೇರಿ ಅವರನ್ನು ವರ್ಗಾಯಿಸಿದ ಸಂದರ್ಭ ಕುಂಬಳೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀಜಿತ್ ಅವರನ್ನು ವಾರದಲ್ಲಿ ಮೂರು ದಿವಸಗಳ ಕಾಲ ತಾತ್ಕಾಲಿಕವಾಘಿ ನೇಮಿಸಲಾಗಿತ್ತು.
ಒಂದೆಡೆ ಕಾಸರಗೋಡಿಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸುವಲ್ಲಿ ಹಿಂದೇಟುಹಾಕುತ್ತಿರುವ ಸರ್ಕಾರ, ಪ್ರಸಕ್ತ ಜನತೆ ಹೆಚ್ಚು ಆಶ್ರಯಿಸುತ್ತಿರುವ ಕಾಸರಗೋಡು ಜನರಲ್ ಆಸ್ಪತ್ರೆ ಬಗ್ಗೆಯೂ ನಿರ್ಲಕ್ಷ್ಯ ಧೋರಣೆ ತಳೆಯುತ್ತಿರುವುದು ಜನರನ್ನು ಅಸಮಧಾನಕ್ಕೀಡುಮಾಡಿದೆ.