ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ವಾಯುದಾಳಿ ಬಳಿಕ ಭಾರತೀಯ ವಾಯುಸೇನೆ ಪಾಕಿಸ್ತಾನದ ಸೇನಾ ಕ್ಯಾಂಪ್ ಗಳ ಮೇಲೂ ದಾಳಿಗೆ ಸಿದ್ಧವಾಗಿತ್ತು ಎಂದು ಭಾರತೀಯ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಎಸ್ ಧನೋವಾ ಅವರು, ಬಾಲಾಕೋಟ್ ವಾಯುದಾಳಿ ಕುರಿತಂತೆ ಇದೇ ಮೊದಲ ಬಾರಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಾಕೋಟ್ ವಾಯುದಾಳಿ ಕುರಿತ ಪ್ರಸ್ತಾವನೆ ಸಂದರ್ಭದಲ್ಲೇ ಭಾರತ ಎಲ್ಲ ರೀತಿಯ ಪ್ರತಿಕ್ರಿಯೆಗಳಿಗೆ ನಾವು ಸಿದ್ಧರಾಗಿದ್ದೆವು. ವಾಯುದಾಳಿ ಬಳಿಕ ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿಗೆ ಮುಂದಾದರೆ ಪಾಕಿಸ್ತಾನದ ಎಲ್ಲ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲು ನಾವೂ ಕೂಡ ಸಕಲ ರೀತಿಯಲ್ಲೂ ಸಜ್ಜಾಗಿದ್ದೆವು. ಪಾಕಿಸ್ತಾನದ ಪ್ರಮುಖ ಸೇನಾ ಮತ್ತು ವಾಯುಸೇನಾ ನೆಲೆಗಳ ಮೇಲೆ ದಾಳಿಗೆ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೆವು. ಬ್ರಹ್ಮೋಸ್ ಅಣು ಕ್ಷಿಪಣಿ ಸಹಿತ ಸುಖೋಯ್ 30 ಯುದ್ಧ ವಿಮಾನಗಳೂ ಕೂಡ ಯಾವುದೇ ಕ್ಷೇಣದಲ್ಲಿ ಟೇಕ್ ಆಫ್ ಗೆ ಸಜ್ಜಾಗಿದ್ದವು. ಅಂದು ನಮ್ಮ ಸೇನೆಯ ಎಲ್ಲ ಮೂರು ದಳಗಳು ಅಂದರೆ ಕಾಲ್ದಳ, ವಾಯುದಳ ಮತ್ತು ನೌಕಾದಳ ದಾಳಿಗೆ ಸಜ್ಜಾಗಿತ್ತು ಎಂದು ಧನೋವಾ ಹೇಳಿದ್ದಾರೆ.
ಪಾಕಿಸ್ತಾನವೇನಾದರೂ ನಮ್ಮ ಜೆಟ್ ಗಳನ್ನು ಹೊಡೆದುರುಳಿಸಲು ಕ್ಷಿಪಣಿಗಳ ಪ್ರಯೋಗಿಸದರೆ ಅವುಗಳನ್ನು ಧ್ವಂಸ ಮಾಡಲು ಕ್ಷಿಪಣಿ ನಾಶಕಗಳನ್ನು ನಾವು ಸಿದ್ಧವಾಗಿಟ್ಟುಕೊಂಡಿದ್ದೆವು ಎಂದು ಧನೋವಾ ಹೇಳಿದ್ದಾರೆ.