ಕಾಸರಗೋಡು: ದಕ್ಷಿಣ ಕೇರಳದಿಂದ ಆಗಮಿಸಿ, ಕಣ್ಣೂರು ವರೆಗೆ ಸಂಚಾರ ಕೊನೆಗೊಳಿಸುವ ಎಲ್ಲ ಎಕ್ಸ್‍ಪ್ರೆಸ್ ರೈಲುಗಳನ್ನು ಕುಂಬಳೆವರೆಗೆ ವಿಸ್ತರಿಸುವುದರ ಜತೆಗೆ ಕುಂಬಳೆಯನ್ನು ರೈಲ್ವೆ ಟರ್ಮಿನಲ್ ಸ್ಟೇಶನ್ ಆಗಿ ಪರಿವರ್ತಿಸುವಂತೆ ಮತ್ತೆ ಬೇಡಿಕೆ ಹೆಚ್ಚಾಗತೊಡಗಿದೆ. ಪ್ರಸಕ್ತ ಕುಂಬಳೆ ರೈಲ್ವೆ ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. ರೈಲ್ವೆ ಇಲಾಖೆಗೆ ಸೇರಿದ 35ಎಕರೆ ವಿಶಾಳ ಜಾಗ ಹೊಂದಿದ್ದರೂ, ಇದರಲ್ಲಿ ಬಹುತೇಕ ಭಾಗ ಕಬಳಿಕೆಯಾಗಿದ್ದು, ಸಮಗ್ರ ಸರ್ವೇ ನಡೆಸಬೇಕಾದ ಅನಿವಾರ್ಯತೆಯಿದೆ. ಬಹುತೇಕ ಕಟ್ಟಡಗಳೂ ರೈಲ್ವೆ ಇಲಾಖೆ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ. ಇವೆಲ್ಲವನ್ನೂ ತೆರವುಗೊಳಿಸಿ ಸಮಗ್ರ ಅಭಿವೃದ್ಧಿ ನಡೆಸಿದಲ್ಲಿ ಟರ್ಮಿನಲ್ ಸ್ಟೇಶನ್ ನಿರ್ಮಾಣಕಾರ್ಯ ಕಷ್ಟಸಾಧ್ಯವಾಗದು ಎಂಬುದಾಗಿ ರೈಲ್ವೆ ಬಳಕೆದಾರರ ಸಂಘಟನೆ ಪದಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಜಿಲ್ಲೆಯಲ್ಲಿ 16 ನಿಲ್ದಾಣ:
ಕಾಸರಗೋಡು ಜಿಲ್ಲೆಯಲ್ಲಿ ಮೂರು'ಎ'ದರ್ಜೆ ನಿಲ್ದಾಣ, ಹತ್ತು ಆದರ್ಶ ನಿಲ್ದಾಣಗಳ ಸಹಿತ ಒಟ್ಟು 16ರೈಲ್ವೆ ನಿಲ್ದಾಣಗಳು ಕಾರ್ಯಾಚರಿಸುತ್ತಿದೆ. ಆದರೆ ಕಾಸರಗೋಡು ಕೇಂದ್ರ ಸಹಿತ ಮೂರು ರೈಲ್ವೆ ನಿಲ್ದಾಣಗಳನ್ನು'ಎ'ದರ್ಜೆ ಹಾಗೂ ಉಳಿದವುಗಳನ್ನು ಆದರ್ಶ ನಿಲ್ದಾಣಗಳೆಂದು ಗುರುತಿಸಲ್ಪಟ್ಟಿದ್ದರೂ, ಕಾರ್ಯನಿರ್ವಹಣೆ ಮಾತ್ರ ಕಳಪೆಯಾಗಿದೆ.
ಪ್ರಸಕ್ತ ಕೇರಳ, ಕರ್ನಾಟಕ, ಮುಂಬೈ ಸಹಿತ ನಾನಾ ಕಡೆ ಸಂಚರಿಸುವ ರೈಲುಗಳು ಮಂಗಳೂರಿನಿಂದ ಆರಂಭಗೊಳ್ಳುತ್ತಿದ್ದು, ಸ್ಥಳಾವಕಾಶದ ಕೊರತೆ ಎದುರಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಕುಂಬಳೆಯಲ್ಲಿ ಟರ್ಮಿನಲ್ ನಿಲ್ದಾಣ ಸ್ಥಾಪನೆಗೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಕೇರಳದಲ್ಲಿ ಎರ್ನಾಕುಳಂ ಜಂಕ್ಷನ್, ತಿರುವನಂತಪುರ ಕೊಚ್ಚುವೇಳಿಯಲ್ಲಿ ಪ್ರಮುಖ ಟರ್ಮಿನಲ್ ನಿಲ್ದಾಣ ಕಾರ್ಯಾಚರಿಸುತ್ತಿದೆ. ಜತೆಗೆ ತಿರುವನಂತಪುರ ನೇಮಂನಲ್ಲಿ ಟರ್ಮಿನಲ್ ಸ್ಥಾಪನೆಗೆ ರೈಲ್ವೆ ಇಲಾಖೆ ಅಂತಿಮ ತಯಾರಿಯಲ್ಲಿದೆ. ಕುಂಬಳೆ ರೈಲ್ವೆ ನಿಲ್ದಾಣವನ್ನು ಟರ್ಮಿನಲ್ ಸ್ಟೇಶನ್ ಆಗಿ ಮೇಲ್ದರ್ಜೆಗೇರಿಸುವುದರಿಂದ, ಮಂಗಳೂರಿನಲ್ಲಿ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ.
ಅಗತ್ಯ ಸ್ಥಳಾವಕಾಶ:
ಕಾಸರಗೋಡಿನಿಂದ ರಸ್ತೆ ಹಾದಿ ಮೂಲಕ 12ಕಿ.ಮೀ ಹಾಗೂ ರೈಲ್ವೆ ಹಾದಿಯಲ್ಲಿ 8ಕಿ.ಮೀ ದೂರದಲ್ಲಿರುವ ಕುಂಬಳೆಯಲ್ಲಿ ಟರ್ಮಿನಲ್ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶ ಹೊಂದಿದೆ. ಸುಮಾರು 38ಎಕರೆ ಜಾಗ ಹೊಂದಿದ್ದು, ಟರ್ಮಿನಲ್ ಸ್ಥಾಪನೆಗೆ ಅಗತ್ಯವಿರುವ ಹದಿನೈದಕ್ಕೂ ಹೆಚ್ಚು ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಬೇಕಾದ ಸ್ಥಳಾವಕಾಶವಿದೆ. ರೈಲ್ವೆ ಟರ್ಮಿನಲ್ ಸ್ಥಾಪನೆಯಿಂದ ರೈಲ್ವೆ ನಿಲ್ದಾಣದ ಜತೆಗೆ ಪೇಟೆಯ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿರುವ ಸರೋವರ ಕ್ಷೇತ್ರ ಶ್ರೀ ಅನಂತಪದ್ಮನಾಭ ದೇವಸ್ಥಾನ, ದೇಶದ ಪ್ರತಿಷ್ಠಿತ ರಕ್ಷಣಾ ಸಂಸ್ಥೆಗೆ ಬಿಡಿ ಭಾಗ ತಯಾರಿಸುವ ಎಚ್‍ಎಎಲ್ ಘಟಕ, ಪೆರ್ಲದ ಉಕ್ಕಿನಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಲು ಕುಂಬಳೆಯಿಂದ ತೆರಳಲು ಸನಿಹ ಹಾದಿಯಾಗಿದೆ.
ರೈಲ್ವೆ ಅಭಿವೃದ್ಧಿಗೆ ಆಗ್ರಹ:
ಕಾಸರಗೋಡು ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಬಹಳಷ್ಟು ಬೇಡಿಕೆಗಳಿವೆ. ಕಾಞಂಗಾಡು-ಪಾಣತ್ತೂರು-ಕಾಣಿಯೂರು ನೂತನ ರೈಲ್ವೆ ಹಳಿ ನಿರ್ಮಾಣಕಾರ್ಯ ಕೈಗೆತ್ತಿಕೊಳ್ಳಲು ಕೇಂದ್ರದೊಂದಿಗೆ ಜಿಲ್ಲೆಯ ಸಂಸದರು ದೀರ್ಘ ಕಾಲದಿಂದ ಒತ್ತಡ ಹೇರುತ್ತಿದ್ದಾರೆ. ಕೋಟಿಕುಳಂನಲ್ಲಿ ಅಪಘಾತ ಸಾಧ್ಯತೆ ಹೆಚ್ಚಾಗಿರುವ ರೈಲ್ವೆ ಕ್ರಾಸಿಂಗ್ ಬದಲು ಮೇಲ್ಸೇತುವೆ ನಿರ್ಮಿಸುವುದು, ತಿರುವನಂತಪುರ-ಕಣ್ಣೂರು ಜನಶತಾಬ್ದಿ ಎಕ್ಸ್‍ಪ್ರೆಸ್ ರೈಲನ್ನು ಕುಂಬಳೆ ವರೆಗೆ ವಿಸ್ತರಿಸಬೇಕು, ಬೇಕಲದ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸಬೇಕು, ಬೈಂದೂರ್(ಕೊಲ್ಲೂರು)-ಶೋರ್ನೂರ್ ರೈಲು ಸಂಚಾರ ಪುನಾರಂಭಿಸುವುದರ ಜತೆಗೆ ಪಳನಿ, ಮಧುರೆ ಹಾದಿಯಾಗಿ ರಾಮೇಶ್ವರ ವರೆಗೂ ವಿಸ್ತರಿಸುವುದು, ಹಗಲು ಹೊತ್ತು ಬೆಳಗ್ಗೆ 9ರಿಂದ ಸಾಯಂಕಾಲ 4ರ ವರೆಗೆ ಕಣ್ಣೂರು-ಮಂಗಳೂರು ರೂಟಲ್ಲಿ ಮತ್ತಷ್ಟು ರೈಲುಗಳನ್ನು ಅಳವಡಿಸುವುದು, ಕಾಸರಗೋಡು ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‍ಗಳ ಸಂಖ್ಯೆ ಹೆಚ್ಚಿಸುವುದು, ಮಂಗಳೂರು-ಕಣ್ಣೂರು ಪ್ಯಾಸೆಂಜರ್ ರೈಲು ಶೀಘ್ರ ಆರಂಭಿಸಬೇಕು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಕೂಗು ಕೇಳಿಬರುತ್ತಿದೆ.
ಅಭಿಮತ: ಸಂಸದನಾಗಿ ಆಯ್ಕೆಯಾದಂದಿನಿಂದ ಜಿಲ್ಲೆಯ ರೈಲ್ವೆ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡಿದ್ದೇನೆ. ಇದರಲ್ಲಿ ಕಾಞಂಗಾಡು-ಕಾಣಿಯೂರು ರೈಲ್ವೆ ಹಳಿ ನಿರ್ಮಾಣ, ಕುಂಬಳೆಯಲ್ಲಿ ಟರ್ಮಿನಲ್ ಸ್ಟೇಶನ್ ನಿರ್ಮಾಣ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ರೈಲ್ವೆ ಖಾತೆ ಸಚಿವ ಪೀಯೂಷ್ ಅಗರ್‍ವಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಜಿಲ್ಲೆಯ ರೈಲ್ವೆ ವಲಯದ ಅಭಿವೃದ್ಧಿ ಬಗ್ಗೆ ಸಚಿವರು ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದಾರೆ.
ರಾಜ್‍ಮೋಹನ್ ಉಣ್ಣಿತ್ತಾನ್
ಸಂಸದರು, ಕಾಸರಗೋಡು