ನವದೆಹಲಿ: ಪೌರತ್ವ ( ತಿದ್ದುಪಡಿ) ಕಾಯ್ದೆ ವಿರೋಧಿಸಿ ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ, ಅಧೀರ್ ರಂಜನ್ ಚೌಧರಿ ಅಸ್ಸಾಂ ಹೊಸ ಕಾಶ್ಮೀರವಾಗುತ್ತಿದೆ ಎಂದಿದ್ದಾರೆ.
ಇಡೀ ಈಶಾನ್ಯ ಪ್ರದೇಶ, ವಿಶೇಷವಾಗಿ ಅಸ್ಸಾಂ ಹಿಂಸಾಚಾರದಲ್ಲಿ ಮುಳುಗಿದೆ. ಇದು ರಾಷ್ಟ್ರದ ಸುರಕ್ಷತೆ ಮತ್ತು ಸಂರಕ್ಷಣೆಗೆ ಹಾನಿಕಾರಕವಾಗಿದೆ ಎಂದು ಆತಂಕಕಾರಿ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.ಅಸ್ಸಾಂ ದೇಶಕ್ಕೆ ಆಯಕಟ್ಟಿನ ಪ್ರಮುಖ ಸ್ಥಳವೆಂದು ಗುರುತಿಸಲ್ಪಟ್ಟಿದೆ. ಒಂದು ಕಡೆ ಇದು ಕಾಶ್ಮೀರವಾಗಿದ್ದರೆ ಮತ್ತೊಂದೆಡೆ ಹೊಸ ಕಾಶ್ಮೀರವಾಗಿದ್ದು, ಎರಡರ ಬಗ್ಗೆಯೂ ತುಂಬಾ ಕಾಳಜಿ ವಹಿಸಬೇಕಾಗಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಪಶ್ಚಿಮ ಬಂಗಾಳ ರಾಜ್ಯದ ಜಿಲ್ಲೆಗಳಲ್ಲಿಯೂ ಹಿಂಸಾಚಾರಕ್ಕೆ ಕಾರಣವಾಗಿದೆ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಹಿಂಸಾಚಾರ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಲಿನ ರಾಜ್ಯಸರ್ಕಾರವನ್ನು ಈಗಾಗಲೇ ಮನವಿ ಮಾಡಿಕೊಂಡಿರುವುದಾಗಿ ಚೌಧರಿ ತಿಳಿಸಿದ್ದಾರೆ.