ಕಾಸರಗೋಡು: ಸಮಸ್ತ ಕೇರಳ ಜಮೀಯತ್ತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ಕಾಸರಗೋಡು ಚೆಂಬರಿಕ ಖಾಝಿ ಆಗಿದ್ದ ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ಮರು ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಆಗ್ರಹಿಸಿದ್ದಾರೆ.
ಕೇರಳದ 19 ಸಂಸದರ ಸಹಿ ಹಾಕಿದ ಪತ್ರವನ್ನು ಗೃಹ ಸಚಿವರಿಗೆ ಸಲ್ಲಿಸಲಾಯಿತು. ಇದರ ಆಧಾರದ ಮೇಲೆ ಸಿಬಿಐ ತನಿಖೆಗೆ ಸಚಿವರು ಭರವಸೆ ನೀಡಿದ್ದಾರೆಂದು ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
2010 ಫೆ.15 ರಂದು ಬೆಳಗ್ಗೆ 6.50 ಕ್ಕೆ ಸಿ.ಎಂ.ಅಬ್ದುಲ್ ಮುಸ್ಲಿಯಾರ್ ಅವರ ಮೃತದೇಹ ಮನೆಯಿಂದ ಕೆಲವೇ ದೂರದಲ್ಲಿರುವ ಚಂಬರಿಕ ಕಡಪ್ಪುರದಲ್ಲಿ ಪತ್ತೆಯಾಗಿತ್ತು, ಈ ಬಗ್ಗೆ ಸ್ಥಳೀಯ ಪೆÇಲೀಸರು ತನಿಖೆ ನಡೆಸಿ ಆತ್ಮಹತ್ಯೆ ಎಂಬ ನಿಗಮಕ್ಕೆ ಬಂದಿದ್ದರು. ಬಳಿಕ ಸಿಬಿಐ ತನಿಖೆಯನ್ನು ವಹಿಸಿಕೊಂಡಿತ್ತು. ಸಿಬಿಐ ತನಿಖೆಯಲ್ಲೂ ಮುಸ್ಲಿಯಾರ್ ಚೆಂಬರಿಕ ತೀರದಲ್ಲಿರುವ ಬಂಡೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತೀರ್ಮಾನಕ್ಕೆ ಬಂದಿತ್ತು. ಇದರ ಆಧಾರದಲ್ಲಿ ಸಿಬಿಐ ಸಲ್ಲಿಸಿದ ವರದಿಯಲ್ಲಿ ಆತ್ಮಹತ್ಯೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಸಾವು ಆತ್ಮಹತ್ಯೆ ಎಂಬ ಅಭಿಪ್ರಾಯಪಡಲಾಯಿತು. ಈ ವರದಿಯನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ಕಾಸರಗೋಡಿನಲ್ಲಿ ಕಳೆದ 10 ವರ್ಷಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.