ಕಾಸರಗೋಡು: ಪಡಿತರ ವಿತರಣೆ ವ್ಯವಸ್ಥೆಯನ್ನು ಕೇರಳ ಸರ್ಕಾರ ಸಂಪೂರ್ಣ ಬುಡಮೇಲುಗೊಳಿಸಿರುವುದಾಗಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್(ಎಕೆಆರ್‍ಆರ್‍ಡಿಎ)ರಾಜ್ಯ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಜಾನಿ ನೆಲ್ಲೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ರಿಸ್‍ಮಸ್ ಹಬ್ಬ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ 40ಲಕ್ಷ ವರೆಗಿನ ಕುಟುಂಬಗಳಿಗೆ ಸೀಮೆ ಎಣ್ಣೆ ಲಭ್ಯವಾಗದ ಸ್ಥಿತಿಯಿದೆ. ಇನ್ನು ಪೂರೈಕೆಯಾಗುತ್ತಿರುವ ಪಡಿತರ ಸಾಮಗ್ರಿಗಳೂ ಕಳಪೆಯಾಗಿದೆ. ಇನ್ನು ದಾಸ್ತಾನು ಹೊಂದಿದ್ದರೂ, ಸರ್ಕಾರ ಉದ್ದೇಶಪೂರ್ವಕವಾಗಿ ವಿತರಣೆ ಸ್ಥಗಿತಗೊಳಿಸುವಂತೆ ಸೂಚಿಸುತ್ತಿದ್ದು, ಇದರಿಂದ ದಾಸ್ತಾನಿರುವ ಪಡಿತರ ಸಾಮಗ್ರಿ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಸೀಮೆಎಣ್ಣೆ, ಮತ್ತು ಗುಣಮಟ್ಟದ ಅಕ್ಕಿ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ಎಪಿಎಲ್ ನಾನ್ ಸಬ್ಸಿಡಿ ಕಾರ್ಡುಗಳಿಗೆ ಸೀಮೆ ಎಣ್ಣೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಸಬ್ಸಿಡಿ ಹೊಂದಿರುವ ಎಪಿಎಲ್ ಕಾರ್ಡುಗಳಿಗೆ 300ಎಂ.ಎಲ್ ಸೀಮೆ ಎಣ್ಣೆ ಮಾತ್ರ ವಿತರಿಸಲಾಗುತ್ತಿದೆ. ರೇಶನ್ ಡೀಲರ್ಸ್‍ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ರೇಶನ್ ಸಾಮಗ್ರಿ ವಿತರಣೆಯಲ್ಲಿನ ಲೋಪ ಖಂಡಿಸಿ ಕೇಂದ್ರಸರ್ಕಾರದ ವಿರುದ್ಧ ಅಸೋಸಿಯೇಶನ್ ನಡೆಸುವ ಪ್ರತಿಭಟನೆಗೆ ಪರೋಕ್ಷ ಬೆಂಬಲ ನೀಡುವ ಕೇರಳ ಸರ್ಕಾರ, ಡೀಲರ್‍ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮ ಕೈಗೊಳ್ಳದೆ, ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದಾಲಿ, ರಾಜ್ಯ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಮಾನ್, ಸಂಘಟನಾ ಕಾರ್ಯದರ್ಶಿ ನಟರಾಜನ್, ಜಿಲ್ಲಾಸಮಿತಿ ಅಧ್ಯಕ್ಷ ಶಂಕರ ಬೆಳ್ಳಿಗೆ, ಕಾರ್ಯದರ್ಶಿ ಬಾಲಕೃಷ್ಣ ಬಲ್ಲಾಳ್, ಸತೀಶನ್ ಇಡವೇಲಿ, ಇ.ಕೆ ಅಬ್ದುಲ್ಲ ಉಪಸ್ಥಿತರಿದ್ದರು.