ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ. ಕಾಯ್ದೆ ವಿರುದ್ಧ ಸಾಮೂಹಿಕ ಆಂದೋಲನಕ್ಕೆ ಮಮತಾ ಬ್ಯಾನರ್ಜಿ ಕರೆ ನೀಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಹಲವಾರು ಮುಸ್ಲಿಂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ರೈಲು ಹಳಿಗಳು, ರಸ್ತೆಗಳಲ್ಲಿ ಹಿಂಸಾಚಾರದ ಪ್ರತಿಭಟನೆ ಮಾಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆ ಮುಗಿಯದೇ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿಸಿ, ಹೌರಾ, ಮುರ್ಶಿರಾಬಾದ್, ಉಲುಬೆರಿಯಾ ಸೇರಿದಂತೆ ಹಲವೆಡೆ ರೈಲು ಹಳಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಮ ರೈಲು ಸೇವೆಗಳು ವ್ಯತ್ಯಯಗೊಂಡಿವೆ.
ಹಲವೆಡೆ ಟೈರ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ. ಜಮೈತ್ ಉಲೇಮಾ-ಎ-ಹಿಂದ್ ನಾಯಕ ಸಿದ್ಧಿಕ್-ಉಲ್ಲಾ-ಚೌಧರಿ "ಯಾವುದೇ ರಾಜಕೀಯ ಪಕ್ಷಕ್ಕೂ ಬಂಗಾಳವನ್ನು ಧರ್ಮದ ಆಧಾರದಲ್ಲಿ ಒಡೆಯುವುದಕ್ಕೆ ಬಿಡುವುದಿಲ್ಲ, ಪೌರತ್ವ ಕಾಯ್ದೆ ಬಂಗಾಳದಲ್ಲಿ ಜಾರಿಯಾಗುವುದಕ್ಕೆ ಬಿಡುವುದಿಲ್ಲ, ಕಾಯ್ದೆಯ ವಿರುದ್ಧ ಸಾಮೂಹಿಕ ಆಂದೋಲನ ನಡೆಸುತ್ತೇವೆ ಎಂದು ಹೇಳಿದ್ದಾರೆ.