ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆಗೂ ದೇಶದ ನಾಗರಿಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಪಟ್ಟಭದ್ರ ಹಿತಾಸಕ್ತಿಗಳು ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸುತ್ತಿವೆ. ಅನೇಕ ಕಡೆ ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುತ್ತಿವೆ. ವಾಸ್ತವವಾಗಿ ಕಾಯ್ದೆಗೂ ಭಾರತದ ನಾಗರಿಕರಿಗೂ ಸಂಬಂಧವಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ದೊರೆತಿದೆ. ಭಾರತದಲ್ಲಿ ಯಾರೊಬ್ಬರೂ ಭಯ ಪಡುವ ಅಗತ್ಯವಿಲ್ಲ. ಆದರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯವೂ ಇಲ್ಲದೆ, ರಕ್ಷಣೆಯೂ ಇಲ್ಲವಾಗಿದೆ ಎಂದು ಹೇಳಿದ್ದಾರೆ. ಕಳೆದ ಏಳು ತಿಂಗಳಲ್ಲಿ ಸಂಸತ್ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಿದೆ. ಸಂವಿಧಾನದ 370ನೇ ವಿಧಿ, ತ್ರಿವಳಿ ತಲಾಖ್ ಮತ್ತು ಪೌರತ್ವ ತಿದ್ದುಪಡಿ ಮಸೂದೆಗಳನ್ನು ಸಂಸತ್ ಅಂಗೀಕರಿಸಿದೆ. ಇವೆಲ್ಲವನ್ನೂ ದೇಶ ಮೊದಲು ಎಂಬ ಧ್ಯೇಯದೊಂದಿಗೆ ಜಾರಿಗೊಳಿಸಲಾಗಿದೆ. ಇವನ್ನು ಬಿಜೆಪಿ ಎಂದಿಗೂ ರಾಜಕೀಯವಾಗಿ ನೋಡಿಲ್ಲ. ಆದರೆ, ಈ ಎಲ್ಲ ವಿಷಯಗಳಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುವುದರ ಮೂಲಕ ದೇಶದ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಂಡಿದೆ. ತೃಣಮೂಲ ಕಾಂಗ್ರೆಸ್ ನಾಯಕರು ಕಾಯ್ದೆ ಪರವೇ ಮಾತನಾಡಿದ್ದರು. 2003ರಲ್ಲಿ ಡಾ.ಮನಮೋಹನ್ ಸಿಂಗ್ ಸಹ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಎದುರಿಸಿದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಬೇಕೆಂದು ಹೇಳಿದ್ದರು. ಆದರೆ, ಈಗ ಅವರೂ ಮೌನವಾಗಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯ್ ಅವರು ಸಹ 2012ರಲ್ಲಿ ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾ ಹಿಂದೂಗಳಿಗೆ ಪೌರತ್ವ ನೀಡುವ ಕುರಿತು ಒತ್ತಾಯಸಿದ್ದರು. ಇನ್ನು ಸಿಪಿಎಂ ನ ಪ್ರಕಾಶ್ ಕಾರಟ್ ಸಹ ಇದೇ ಒತ್ತಾಯವನ್ನು ಮಾಡಿದ್ದರು. 2012 ಮತ್ತು 2018ರಲ್ಲಿ ಸಿಪಿಐ ಮತ್ತು ಸಿಪಿಎಂ ಈ ಕುರಿತು ನಿರ್ಣಯಗಳನ್ನೂ ತೆಗೆದುಕೊಂಡಿದ್ದವು. ಚುನಾವಣೆಯಲ್ಲಿ ಮತ ಪಡೆಯುವುದಕ್ಕೆ ಅನುಕಂಪದ ನಾಟಕ ಆಡಿದ್ದವು. ಆದರೆ, ಈಗ ಪ್ರತಿಪಕ್ಷಗಳು ತಮ್ಮ ನಿಲುವುಗಳನ್ನು ಬದಲಿಸಿ, ಜನರನ್ನು ದಾರಿತಪ್ಪಿಸುವ ಪ್ರಯತ್ನವನ್ನು ಮಾಡುತ್ತಾ, ಹಿಂಸಾಚಾರಗಳಿಗೂ ಪ್ರಚೋದಿಸುತ್ತಿವೆ. ಬಿಜೆಪಿ ಜನಸಂಘದ ಕಾಲದಿಂದಲೂ ತನ್ನ ನಿಲುವು ಬದಲಿಸಿಲ್ಲ ಎಂದು ಅವರು ಹೇಳಿದರು.