ಮಂಜೇಶ್ವರ : ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಷರ್ಂಪ್ರತಿ ನಡೆಯುವ ಮೂರು ದಿನಗಳ ಭೂತಬಲಿ ಉತ್ಸವ ಮಂಗಳವಾರ ಸಂಪನ್ನಗೊಂಡಿತು.
ಆಡಳಿತ ಮೊಕ್ತೇಸದ ವಿ. ರವೀಂದ್ರ ರಾವ್, ಪವಿತ್ರಪಾಣಿ ಕೆ.ಎಸ್. ಕೃಷ್ಣ ಭಟ್, ಪಿ.ಕೆ. ರವೀಂದ್ರ ಶೆಟ್ಟಿ, ಕೆ. ವಿಶ್ವನಾಥ ಶೆಟ್ಟಿ ಹಾಗೂ ವಿದ್ಯಾನಿಕೇತನದ ಅಧ್ಯಕ್ಷ ಸುರೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ಭಾನುವಾರ ಪ್ರಾರ್ಥಣೆ , ನಿತ್ಯಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು.
ಸೋಮವಾರ ಶ್ರೀ ದೇವರ ಬಯ್ಯನ ಬಲಿ ಹೊರಟ ಬಳಿಕ ರಾತ್ರಿ ಉದ್ಯಾವರ ಶ್ರೀ ಭವಗವತೀ ಅಮ್ಮನವರ ಭೇಟಿ ಉತ್ಸವ ನಡೆಯಿತು. ವಿಶೇಷ ಭೇಟಿ ಉತ್ಸವದ ಸಂದರ್ಭ ಸಹಸ್ರ ಸಂಖ್ಯೆಯಯಲ್ಲಿ ಭಕ್ತಾಭಿಮಾನಿಗಳು ನೆರೆದಿದ್ದರು. ಬಳಿಕ ವಸಂತ ಕಟ್ಟೆ ಪೂಜೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಕೇಂದ್ರ ಮತ್ತು ಅಧ್ಯಯನ ಕೇಂದ್ರ ಕುಂಜತ್ತೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಕೃಷ್ಣಾರ್ಜುನ ಕಾಳಗ ಪ್ರಸಂಗ ಪ್ರಸ್ತುತಿಗೊಂಡಿತು. ಜೊತೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಸಂಗಮ ನಡೆಯಿತು.
ಮಂಗಳವಾರ ಬೆಳಗ್ಗಿನ ಬಲಿ ಹೊರಟ ಬಳಿಕ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಬಟ್ಲು ಕಾಣಿಕೆ, ಮಹಾಪ್ರಸಾದ ವಿತರಣೆ ನಡೆಯಿತು. ಮಹಾ ಮಂತ್ರಾಕ್ಷತೆ, ಶ್ರೀ ನಾಗದೇವರಿಗೆ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಸೇವೆ ಹಾಗೂ ಮಹಾ ಪೂಜೆ, ಪ್ರಸಾದ ವಿತರಣೆಯೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರಗಿದ ಭೂತಬಲಿ ಉತ್ಸವ ಸಂಪನ್ನಗೊಂಡಿತು.