ಕಾಸರಗೋಡು: ಪ್ರಾಚೀನ ಭಾಷೆಗಳ ಪೈಕಿ ವಿಶೇಷವಾದ ಹಿನ್ನೆಲೆಗಳಿರುವ ತುಳು ಭಾಷೆಯ ಬಗೆಗೆ ಪ್ರಸ್ತುತ ವ್ಯಾಪಕ ಪ್ರಮಾಣದ ಚರ್ಚೆ, ಬೆಳವಣಿಗೆಗೆ ಪೂರಕವಾದ ಕಾರ್ಯಚಟುವಟಿಕೆಗಳು ಆಗುತ್ತಿರುವುದು ಹೆಮ್ಮೆ ಎನಿಸುತ್ತದೆ. ಶ್ರೀಮಂತ ಪರಂಪರೆಯ ತುಳು ಭಾಷೆಯ ಅಗಾಧ ಪಾಂಡಿತ್ಯಗಳನ್ನು ಇತರ ಭಾಷೆಗಳಿಗೂ ಪರಿಚಯಿಸಲು ಕಾರಣವಾಗುವ ಹೊತ್ತಗೆ ಪ್ರಕಟಗೊಳ್ಳುತ್ತಿರುವುದು ತುಳುವಿಗೆ ಲಭ್ಯವಾದ ವಿಶಾಲ ಸಾಧ್ಯತೆ ಮತ್ತು ಇತರ ಭಾಷೆಗಳಿಗೆ ಒದಗಿಬಂದ ಭಾಗ್ಯವೆಂದು ಸಾಹಿತಿ ಪ್ರೊ.ಸುಕನ್ಯ ಮಾರುತಿ ಬಿ.ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ತುಳು ಅಕಾಡೆಮಿಯ ವತಿಯಿಂದ ಕಾಸರಗೋಡಿನ ಲಲಿತ ಕಲಾ ಸದನದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ತುಳು ತುಲಿಪು ಸಮಾರಂಭದ ಎರಡನೇ ದಿನವಾದ ಬುಧವಾರ ನಡೆದ ಮೊದಲ ಕಾರ್ಯಕ್ರಮದಲ್ಲಿ ಮಲಯಾಳಿಗರಿಗೂ, ಕನ್ನಡಗರಿಗೂ,ತಮಿಳರಿಗೂ ತುಳು ಭಾಷಾ ಲಿಪಿಯನ್ನು ಕಲಿಯಲು ಸಹಾಯವಾಗುವಂತೆ ತಯಾರಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಜಿಲ್ಲಾ ಹಣಕಾಸು ಅಧಿಕಾರಿ ಸತೀಶ್. ಕೆ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಅಕಾಡೆಮಿಯ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್, ಹಿರಿಯ ಕನ್ನಡ ತುಳು ಸಾಹಿತಿ ಪತ್ರಕರ್ತ ಮಲಾರ್ ಜಯರಾಮ್ ರೈ, ಡಾ.ರಾಜೇಶ್ ಬೆಜ್ಜಂಗಳ, ಡಾ.ರತ್ನಾಕರ ಮಲ್ಲಮೂಲೆ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಕೇಶವ ಶೆಟ್ಟಿ ಆದೂರು, ಶಂಕರ ಸ್ವಾಮಿ ಕೃಪಾ, ಜಯರಾಜನ್, ಅಕ್ಷತಾ ರೈ ವಳಮಲೆ, ರಾಜಶ್ರೀ.ಟಿ.ರೈ, ವಿದ್ಯಾಶ್ರೀ ಎಸ್ ಉಲ್ಲಾಳ್, ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ರವೀಂದ್ರ ರೈ ಮಲ್ಲಾವರ ಸ್ವಾಗತಿಸಿ, ರಾಜೀವಿ ಕಳಿಯೂರು ವಂದಿಸಿದರು. ಅಕಾಡೆಮಿ ಸದಸ್ಯೆ ಸಚಿತಾ ರೈ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ಚರ್ಚಾಗೋಷ್ಠಿಯಲ್ಲಿ ಸಾಹಿತಿ ಕೆ.ವಿ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ತುಳು ಸಂಶೋಧನೆದ ಸಾಧ್ಯತೆಲು ವಿಷಯದ ಬಗ್ಗೆ ತುಳು ಸಂಶೋಧಕ ಡಾ.ರಾಜೇಶ್ ಬೆಜ್ಜಂಗಳ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಾದ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ,ಸಂಶೋಧಕ ಕೇಶವ ಶೆಟ್ಟಿ ಆದೂರು, ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ, ತುಳು-ಮಲೆಯಾಳ ಸಾಹಿತಿ ಜಯರಾಜನ್, ಸಂಶೋಧಕಿ ಅಕ್ಷತಾ ರೈ ವಳಮಲೆ ಚರ್ಚೆಯಲ್ಲಿ ಪಾಲ್ಗೊಂಡರು.
ಸಚಿತಾ ರೈ ಸ್ವಾಗತಿಸಿ, ಎಸ್.ನಾರಾಯಣ ಭಟ್ ವಂದಿಸಿದರು. ರವೀಂದ್ರ ರೈ ಮಲ್ಲಾವರ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ತುಳು ರಸಪ್ರಶ್ನೆ ಸ್ಪರ್ಧೆ ನಡೆಯಿತು. ಡಾ.ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ರಾಜಶ್ರೀ ರೈ ಪೆರ್ಲ ಪ್ರಥಮ ಹಾಗೂ ವಾಣಿಶ್ರೀ ದ್ವಿತೀಯ ಬಹುಮಾನಗಳನ್ನು ಪಡೆದರು. ಈ ಸಂದರ್ಭ ಕಾಸರಗೋಡಿನ ತುಳು ಭಾಷೆಯ ಬಗ್ಗೆ ಪ್ರಬಂಧ ಸ್ಪರ್ಧೆಯೂ ನಡೆಯಿತು. ಸಮಾರಂಭಲ್ಲಿ ಈಶ ಲಹರಿ ಕಲಾಕೂಟ ಪುತ್ತೂರು ಅವರಿಂದ ಕಂಗಿಲು ನಲಿಕೆ ಮತ್ತು ಶಂಕರ ಸ್ವಾಮಿಕೃಪಾ ತಂಡದವರಿಂದ ತುಳು ಜಾನಪದ ಗೀತ ಗಾಯನ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ದಿವಾಣ ಶಿವಶಂಕರ ಭಟ್ ನೇತೃತ್ವದ ತಂಡದಿಂದ ತುಳು ಯಕ್ಷಗಾನ ಭಾಗವತಿಕೆ ಪ್ರದರ್ಶನ, ತುಳು ಜನಪದ ನೃತ್ಯಗಳ ಪ್ರದರ್ಶನ ನಡೆಯಿತು.