ಪೆರ್ಲ: ಸದೃಢ ಭಾರತದ ಕನಸು ನನಸಾಗಬೇಕಾದರೆ, ಯುವ ಸಮೂಹ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ.
ಅವರು ಶನಿವಾರ ರಾತ್ರಿ ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಕಾಲೇಜು ವಠಾರದಲ್ಲಿ ಕಾಲೇಜಿಗೆ ನೂತನವಾಗಿ ನಿರ್ಮಿಸಿದ ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, 60ಕೆ.ಜಿ.ವಿಭಾಗದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿಂದು ಪರಿವರ್ತನೆಯ ಕಾಲ ಸನ್ನಿಹಿತವಾಗಿದೆ. ಸ್ವಾಮಿ ವಿವೇಕಾನಂದ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮುಂತಾದವರು ಯುವಜನತೆಯಲ್ಲಿರಿಸಿದ್ದ ಭರವಸೆಯನ್ನು ನಾವು ಹುಸಿಯಾಗಿಸದೆ, ಭಾರತವನ್ನು ಸೂಪರ್ ಪವರ್‍ದೇಶವನ್ನಾಗಿಸಲು ಪಣತೊಡಬೇಕಾಗಿದೆ ಎಂದು ತಿಳಿಸಿದರು.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಬದ ಪ್ರಧಾನ ಅರ್ಚಕ ಎಂ.ವಿಷ್ಣು ನಾವಡ ಮತ್ತು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ)ವಿಷ್ಣುಮೂರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚತ್ತಾಯ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.
ನಾಲಂದ ಕಾಲೇಜು ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಂಗಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯುವಜನತೆಯಲ್ಲಿನ ತಾಳ್ಮೆ, ಸಹನೆ, ಮಾನಸಿಕ, ಶಾರೀರಿಕ ದೃಢತೆ, ಸಾಮಾಜಿಕ ಕಳಕಳಿಯು ಅವರಲ್ಲಿನ ಕ್ರೀಡಾಮನೋಭಾವವನ್ನು ನಿರ್ಣಯಿಸುತ್ತದೆ. ನಿರ್ಣಾಯಕ. ಸಂದಿಗ್ಧ ಪರಿಸ್ಥಿತಿಯ ನಡುವೆಯೂ ದೇಶ ಕಾಯುತ್ತಿರುವ ಧೀರ ಯೋಧರ ಉದಾತ್ತ ಸೇವೆಯಿಂದ ರಾಷ್ಟ್ರಭಕ್ತಿ ಉದ್ದೀಪನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಕ್ರೀಡೆಗಳಲ್ಲಿ ತೊಡಗಿಸುವ ವ್ಯಕ್ತಿ ಎಲ್ಲಾ ಕ್ಷೇತ್ರಗಳಲ್ಲೂ ಸಫಲನಾಗುವನು. ಕ್ರೀಡಾಂಗಣ ನಿರ್ಮಾಣ ಸಾಕಾರಗೊಳಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಶಿವಾಜಿ ಸಂಘಟನೆಯ ಪ್ರಯತ್ನವನ್ನು ಶ್ಲಾಘಿಸಿದರು. ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ, ಅಜಯ್ ಪೈ ಅಮೆಕ್ಕಳ, ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಸಿಆರ್‍ಪಿಎಫ್ ಅಧಿಕಾರಿ ಅಪ್ಪಯ್ಯ ಮಣಿಯಾಣಿ ಬಿ., ಬಿಎಸ್ಸೆಫ್ ಯೋಧರಾದ ಬಾಲಕೃಷ್ಣ ಬದಿ ಮತ್ತು ರಮೇಶ್ ನಾಯ್ಕ್ ಬಿ. ಅವರನ್ನು ಗೌರವಿಸಲಾಯಿತು. ಅವನೀಶ್ ಬಿ.ಶೆಟ್ಟಿ ಪ್ರಾರ್ಥಿಸಿದರು.ಸುಮಿತ್ ರಾಜ್ ಪೆರ್ಲ ಸ್ವಾಗತಿಸಿದರು. ದೀಕ್ಷಿತ್ ಶೆಟ್ಟಿ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಉದಯ ಪೆರ್ಲ ವಂದಿಸಿದರು. .