ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗರ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿದ ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರಿಗೆ ಕಲೆಕ್ಟರೇಟ್‍ನಲ್ಲಿ ಎರಡು ದಿನಗಳಲ್ಲಿ ನಡೆದ ಕನ್ನಡಿಗರ ಸಮಸ್ಯೆಗಳ ಅಹವಾಲು ಸ್ವೀಕಾರದಲ್ಲಿ ಜಿಲ್ಲೆಯ ವಿವಿಧ ಕನ್ನಡ ಪರ ಸಂಘ-ಸಂಸ್ಥೆಗಳು-ಕನ್ನಡ ಭಾಷಾಭಿಮಾನಿಗಳು ಮನವಿ ಸಲ್ಲಿಸಿ ಮನವರಿಕೆ ಮಾಡಿಸಿದ್ದರು. ಈ ಸಂಘ-ಸಂಸ್ಥೆಗಳಿಗೆ ಹಾಗೂ ಕನ್ನಡ ಭಾಷಾಭಿಮಾನಿಗಳಿಗೆ ಕನ್ನಡ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸಿದೆ.
ಎರಡು ದಿನಗಳ ಕಾಲ ಕಾಸರಗೋಡಿನಲ್ಲಿದ್ದುಕೊಂಡು ವಿವಿಧ ಕಚೇರಿಗಳಿಗೆ ತೆರಳಿ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ಪಡೆದು ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸಲಾಗುವುದೆಂದು ವಿಶೇಷಾಧಿಕಾರಿ ತಿಳಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಕನ್ನಡಿಗರು ಸಂಘಟಿತರಾಗಿ ತಮ್ಮ ಸಮಸ್ಯೆಗಳ ಬಗ್ಗೆ ದೂರುಗಳನ್ನು ಸಲ್ಲಿಸಬೇಕೆಂದು ಕನ್ನಡ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.