ಮಂಜೇಶ್ವರ: ಗಡಿನಾಡ ಜಿಲ್ಲೆಯ ಪ್ರಾಚೀನವಾದ ಏಕೈಕ ಕಂಬಳವಾದ ಅರಿಬೈಲು ನಾಗಬ್ರಹ್ಮ ದೇವರ ಅರಿಬೈಲು ಕಂಬಳ ಮತ್ತು ಉತ್ಸವ ಬುಧವಾರ ಸಾಂಪ್ರದಾಯಿಕ ಶ್ರದ್ದೆಯಿಂದ ನೆರವೇರಿತು.
ಕಂಬಳದ ಪ್ರಧಾನ ಅಂಗವಾದ ಉಪವಾಸದ ಕೋಣಗಳನ್ನು ಅರಿಬೈಲು ಶ್ರೀನಾಗಬ್ರಹ್ಮ ಕ್ಷೇತ್ರದ ತಂತ್ರಿವರ್ಯ ರಾಧಾಕೃಷ್ಣ ಅರಿನಾಯರು ಕಂಬಳ ಗದ್ದೆಗೆ ಇಳಿಸಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ತುಳುನಾಡಿನ ಜನಜೀವನ, ಕೃಷಿ ಮೊದಲಾದ ಸಾಂಪ್ರದಾಯಿಕ ವ್ಯವಸ್ಥೆಗಳ ಸಂಕೇತವಾದ ಕಂಬಳದಂತಹ ಉತ್ಸವಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಸಾಮಾಜಿಕ ಒಗ್ಗಟ್ಟು, ಕೃಷಿ ಪ್ರೇರಣೆಯಂತಹ ಸೂಕ್ಷ್ಮಗಳು ಇಂತಹ ಆಚರಣೆಗಳ ಹಿಂದಿರುತ್ತದೆ ಎಂದು ತಿಳಿಸಿದರು.
ಪಾವೂರು ಕುಂಡಾಪು ಅದ್ರಾಮ ಬ್ಯಾರಿ ಅವರ ಕೋಣಗಳು ಉಪವಾಸದ ಕೋಣಗಳಾಗಿ ಚಾಲನೆಗೆ ಸಹಕರಿಸಿತು. ಧಾರ್ಮಿಕ, ಸಾಮಾಜಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅವರು ಕಂಬಳ ನಿರ್ವಹಿಸಿದರು. ಕಟ್ಟೆಮನೆ ಪಕೀರ ಮೂಲ್ಯ ಹಾಗೂ ರಮೇಶ ಕಟ್ಟೆ ತೀರ್ಪುಗಾರರಾಗಿ ಸಹಕರಿಸಿದರು.
ಫಲಿತಾಂಶ:
ಕೌಡೂರುಬೀಡು ಮಾರಪ್ಪ ಭಂಡಾರಿ(ಪ್ರಥಮ), ಕಡಂಬಾರು ಕೆಳಗಿನಮನೆ ಸಂಜೀವ ಮಡಿವಾಳ ಮತ್ತು ತಲಪಾಡಿ ಪಂಜಾಳ ರಕ್ಷಿತ್ ರವೀಂದ್ರ ಪಕಳ(ದ್ವಿತೀಯ), ಮುಳ್ಳೇರಿಯ ಅಡೂರಿನ ಪೂಂಜಕಳ ಚಂದ್ರೋಜಿ ರಾವ್(ತೃತೀಯ), ಕೂಟತ್ತಜೆ ನೀಡಿಂಬಿರಿಯ ಗೋಪಾಲ ಮಡಿವಾಳ(ಚತುರ್ಥ), ಅರಿಬೈಲು ಐತ್ತಪ್ಪ ಸಾಲ್ಯಾನ್(ಪಂಚಮ), ಪಜಿಂಗಾರು ಕಾಡಬೆಟ್ಟು ಆನಂದ(ಆರನೇ ಸ್ಥಾನ)ಬಹುಮಾನಗಳನ್ನು ಪಡೆದುಕೊಂಡರು.