ಪೆರ್ಲ:ಕಾಸರಗೋಡು ಪುತ್ತೂರು ಅಂತಾರಾಜ್ಯ ಸಂಪರ್ಕಿಸುವ ಪೆರ್ಲ ಸ್ವರ್ಗ ಪಾಣಾಜೆ ರಸ್ತೆಯ ಕೋಟೆ, ಸೈಪಂಗಲ್ಲು, ಅರಳಿಕಟ್ಟೆ, ಗಾಳಿಗೋಪುರ ನಡುವೆ ದಟ್ಟವಾಗಿ ಬೆಳೆದು ನಿಂತಿದ್ದ ತೋಟಗಾರಿಕಾ ನಿಗಮದ ರಬ್ಬರ್ ತೋಟದ ಕಳೆ ನಾಶಕ ಬಳ್ಳಿಗಳನ್ನು ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾನುವಾರ ತೆರವು ಗೊಳಿಸಿದರು.
ಅಗಲ ತೀರಾ ಕಿರಿದಾದ ಈ ರಸ್ತೆಯಲ್ಲಿ ಅಂಗನವಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯರು ನಡೆದಾಡುತ್ತಿದ್ದು ಕೋಟೆಯಿಂದ ಗಾಳಿಗೋಪುರ ನಡುವಿನ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದು ನಿಂತ ಹಸಿರು ಬಳ್ಳಿಗಳು ವಿದ್ಯುತ್ ಕಂಬಗಳನ್ನು ಸಂಪೂರ್ಣ ಸುತ್ತುವರಿದು ತಂತಿಗಳ ನಡುವೆ ಪರಸ್ಪರ ಬೆಸೆದಿದ್ದು ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸುವ ಸಾಧ್ಯತೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಕಾಸರಗೋಡು, ಕುಂಬಳೆ, ಪೆರ್ಲ, ಏತಡ್ಕ, ಕಿನ್ನಿಂಗಾರು ಭಾಗಗಳಿಂದ ಕರ್ನಾಟಕದ ಪುತ್ತೂರು, ಉಪ್ಪಿನಂಗಡಿ ಭಾಗಗಳಿಗೆ ಹಾಗೂ ವಿರುದ್ಧವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ವಾಹನ ದಟ್ಟಣೆಯಿಂದ ಕೂಡಿದ್ದು ಕಳೆ ನಾಶಕ ಬಳ್ಳಿಗಳು ವಾಹನ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿತ್ತು. ವಿದ್ಯುತ್ ಕಂಬ, ಸ್ಟೇ ವಯರ್, ಸೂಚನಾ ಫಲಕಗಳನ್ನೂ ಆವರಿಸಿದ ಬಳ್ಳಿಗಳು ಡ್ರೈನೇಜ್ ಕಣಿವೆಗಳನ್ನೂ ಮುಚ್ಚಿದ್ದು ವಾಹನಗಳು ದಿಢೀರ್ ಅಭಿಮುಖವಾಗಿ ಎದುರಾದಾಗ ಬದಿಗೆ ಸರಿದಲ್ಲಿ ಕಣಿವೆಗೆ ಬೀಳುವ ಅಪಾಯ ಸಾಧ್ಯತೆ ಮನಗಂಡು ಕಾಡು ಪೆÇದೆ ತೆರವು ಗೊಳಿಸಲಾಗಿದೆ. ಕಾಲೇಜು ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಹಾಗೂ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಕೆ.ವೈ.ಸುಬ್ರಹ್ಮಣ್ಯ ಭಟ್ ಭಾನುವಾರ ಬೆಳಗ್ಗೆ ಗಾಳಿಗೋಪುರ ಪ್ರಯಾಣಿಕರ ತಂಗುದಾಣ ಪರಿಸರದಲ್ಲಿ ಕಳೆ ನಾಶಕ ಬಳ್ಳಿ, ಕಾಡು ಪೆÇದೆ ತೆರವಿಗೆ ಚಾಲನೆ ನೀಡಿದ್ದು ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ., ಉಪನ್ಯಾಸಕರಾದ ಶ್ರೀನಿಧಿ, ನಿವೇದಿತ ನೇತೃತ್ವ ವಹಿಸಿದರು.
ನಾಲಂದ ಚಾರಿಟೇಬಲ್ ಟ್ರಸ್ಟಿ, ವಿವೇಕಾನಂದ ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಚಹಾ, ಉಪಹಾರ ವ್ಯವಸ್ಥೆ, ಪ್ರಾಂಶುಪಾಲರು ಕಲ್ಲಂಗಡಿ ಹಣ್ಣು, ಸುದರ್ಶನ ಸಮಿತಿ ತಂಪು ಪಾನೀಯ ನೀಡಿ ಸಹಕರಿಸಿದರು.
ಅಭಿಮತ:
'ಪೆರ್ಲ ಸ್ವರ್ಗ ರಸ್ತೆಯಲ್ಲಿ ದಟ್ಟವಾಗಿ ಬೆಳೆದು ನಿಂತ ಕಳೆನಾಶಕ ಬಳ್ಳಿಯ ಅಪಾಯ ಸಾಧ್ಯತೆ ಬಗ್ಗೆ ಕಾಲೇಜು ಪ್ರಾಂಶುಪಾಲರಲ್ಲಿ ಕಳೆ ನಾಶಕ ಬಳ್ಳಿ ತೆರವು ಗೊಳಿಸುವ ಪ್ರಸ್ತಾವನೆ ಇರಿಸಿದ್ದು ಅವರು ಸಮ್ಮತಿಸಿದ್ದು ಅತಿ ಶೀಘ್ರ ತೆರವು ಗೊಳಿಸಲು ಸೂಚಿಸಿದ್ದಾರೆ.ಇದರಂತೆ ಭಾನುವಾರ ಎನ್ನೆಸ್ಸೆಸ್ ಘಟಕ, ಗ್ರಾಮ ವಿಕಾಸ ಯೋಜನೆ ಸದಸ್ಯರ ನೇತೃತ್ವದಲ್ಲಿ ಕಳೆ ನಾಶಕ ಬಳ್ಳಿ ತೆರವು ಗೊಳಿಸಲಾಗಿದೆ'
ಸುರೇಶ್ ಕೆ.ಎಂ.
ನಾಲಂದ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ