ನವದೆಹಲಿ: ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಜಾಲದಿಂದ ಪ್ರಾದೇಶಿಕ ಶಾಂತಿಗೆ ಭಂಗ ಉಂಟಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಹಾಗೂ ಜಪಾನ್ ರಾಷ್ಟ್ರಗಳು ಒತ್ತಾಯಿಸಿವೆ.
ಭಾರತ ಹಾಗೂ ಜಪಾನ್ ರಾಷ್ಟ್ರಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಾತುಕತೆಯಲ್ಲಿ ಜಾಗತಿಕ ಭಯೋತ್ಪಾದನಾ-ವಿರೋಧಿ ಕಾವಲುಗಾರನಾದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೆÇೀರ್ಸ್ (ಎಫ್‍ಎಟಿಎಫ್) ಸೂಚಿಸಿರುವ ಕ್ರಮಗಳನ್ನು ಒಳಗೊಂಡಂತೆ ಭಯೋತ್ಪಾದನೆಯನ್ನು ಎದುರಿಸಲು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳನ್ನು "ಸಂಪೂರ್ಣವಾಗಿ ಪಾಲಿಸಬೇಕು" ಎಂದು ಉಭಯ ದೇಶಗಳು ಸ್ಪಷ್ಟವಾಗಿ ಕರೆ ನೀಡಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಜೈ. ಶಂಕರ್ ನೇತೃತ್ವದ ಭಾರತದ ನಿಯೋಗದಲ್ಲಿದ್ದರೆ ಜಪಾನ್ ಪರ ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ ಮತ್ತು ರಕ್ಷಣಾ ಸಚಿವ ತಾರೊ ಕೊನೊ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ದೇಶಗಳು ತಮ್ಮ ನಿಯಂತ್ರಣದಲ್ಲಿರುವ ಎಲ್ಲಾ ಪ್ರದೇಶಗಳನ್ನು ಇತರ ದೇಶಗಳ ಮೇಲೆ ಯಾವುದೇ ರೀತಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಬಳಸದಂತೆ ನೋಡಿಕೊಳ್ಳುವ ಅಗತ್ಯವನ್ನು ಮಂತ್ರಿಗಳು ಒತ್ತಿಹೇಳಿದ್ದಾರೆ" ಎಂದು ಇಂಡೋ-ಜಪಾನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಭಯೋತ್ಪಾದಕ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ಬೇರೂರಿಸುವಲ್ಲಿ, ಭಯೋತ್ಪಾದಕ ಜಾಲಗಳನ್ನು ಅಡ್ಡಿಪಡಿಸುವ, ಹಣಕಾಸು ಮಾರ್ಗಗಳನ್ನು ನಿರ್ಮೂಲನೆ ಮಾಡುವ ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಆಂದೋಲನವನ್ನು ತಡೆಯುವಲ್ಲಿ ಭಾರತ ಮತ್ತು ಜಪಾನ್ ಎಲ್ಲಾ ದೇಶಗಳಿಗೆ ದೃಢ ನಿರ್ಧಾರ ಕೈಗೊಳ್ಳಬೇಕೆಂದು ಕರೆ ನೀಡಿವೆ.
ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ತೀವ್ರವಾಗಿ ಖಂಡಿಸಿದ ಸಚಿವರು ಇದು ಈ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ಒಪ್ಪಿಕೊಂಡಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.