ಕಾಸರಗೋಡು: ಶಬರಿಮಲೆಯಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಳ ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟು ತಿಳಿಸಿದೆ. ಸನ್ನಿದಾನ ಹಾಗೂ ಪಂಪೆಯಲ್ಲಿ ಆಹಾರವಸ್ತುಗಳ ಬೆಲೆ ಏರಿಸಬೇಕು ಎಂಬುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಶಬರಿಮಲೆ ಘಟಕ ಸರ್ಕಾರವನ್ನು ಆಗ್ರಹಿಸಿತ್ತು. ಇದಕ್ಕೆ ಸರ್ಕಾರ ವಿಸಮ್ಮತಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹೈಕೋರ್ಟು ಮೆಟ್ಟಿಲೇರಿದ್ದರು.
ಶಬರಿಮಲೆಯಲ್ಲಿ ಈಗಾಗಲೇ ಸ್ಟಾಲ್‍ಗಳನ್ನು ಹರಾಜುನಡೆಸಲಾಗಿದ್ದು, ಆಹಾರ ವಸ್ತುಗಳ ಬೆಲೆಯನ್ನು ಹರಾಜಿಗೂ ಮೊದಲೇ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಬೆಲೆಯೇರಿಕೆ ನಡೆಸುವುದು ತಪ್ಪಾಗಲಿದೆ ಎಂದು ಹೈಕೋರ್ಟು ಸೂಚಿಸಿದೆ.
ನಿಗದಿತ ಬೆಲೆಗೆ ಆಹಾರವಸ್ತು ಮಾರಾಟ ಮಾಡಲಾಗುವುದು ಎಂದು ಖಚಿತಪಡಿಸಿದ ನಂತರವಷ್ಟೆ ಸ್ಟಾಲ್‍ಗಳ ಹರಾಜು ನಡೆಸಲಾಗುತ್ತಿದೆ. ನಂತರ ಬೆಲೆಯೇರಿಕೆ ಪ್ರಸ್ತಾಪವನ್ನು ಅಂಗೀಕರಿಸಲು ಸಾಧ್ಯವಿಲ್ಲ. ಹರಾಜಿನ ನಂತರವೂ ಆಹಾರವಸ್ತುಗಳ ಬೆಲೆಯೇರಿಕೆ ನಡೆಸಬಹುದು ಎಂದು ತೀರ್ಮಾನಿಸಿರುತ್ತಿದ್ದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಹರಾಜುದಾರರು ಪಾಲ್ಗೊಳ್ಳುವ ಸಾಧ್ಯತೆಯಿತ್ತು. ಈಗಾಗಲೇ ಮಂಡಲ ಪೂಜಾ ಕಾಲಾವಧಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಆಹಾರವಸ್ತುಗಳ ಬೆಲೆಯೇರಿಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಮುಂದಿನ ವರ್ಷ ಹರಾಜಿಗೂ ಮೊದಲು ಆಹಾರವಸ್ತುಗಳ ಬೆಲೆ ಏರಿಸುವಂತೆ ಸರ್ಕಾರಕ್ಕೆ ಒತ್ತಡಹೇರಲು ವ್ಯಾಪಾರಿಗಳಿಗೆ ಅವಕಾಶವಿರುವುದಾಗಿ ನ್ಯಾಯಾಲಯ ತಿಳಿಸಿದೆ. ಪಂಪೆ ಹಾಗೂ ಸನ್ನಿದಾನದಲ್ಲಿ ವ್ಯಾಪಾರ ನಡೆಸಲು ಅಗತ್ಯವಿರುವ ಲೈಸನ್ಸ್ ಶುಲ್ಕ ಹೆಚ್ಚಿಸಿರುವ, ಅಡುಗೆಕಾರ್ಮಿಕರ ವೇತನ ಹೆಚ್ಚಳ ಹಾಗೂ ನಿತ್ಯೋಪಯೋಗಿ ಸಾಮಗ್ರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಹಾರಸಾಮಗ್ರಿ ಬೆಲೆ ಹೆಚ್ಚಿಸಲು ವ್ಯಾಪಾರಿಸಮಿತಿ ಸರ್ಕಾರವನ್ನು ಆಗ್ರಹಿಸಿತ್ತು.