ನವದೆಹಲಿ: ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಕಾಮುಕರು ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಹಿಂದೆ ಸರಿದಿದ್ದು, ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ಅರ್ಜಿಯ ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಹೇಳಿ ವಿಚಾರಣೆಯನ್ನು ಇಂದು ಬೆಳಗ್ಗೆ 10.30ಕ್ಕೆ ಮುಂದೂಡಿದೆ.ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದು, ಬುಧವಾರ ಹೊಸ ಪೀಠ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿರ್ಭಯಾ ಪರವಾಗಿ ಎಸ್‍ಎ ಬೊಬ್ಡೆ ಸಂಬಂಧಿಕರು ವಾದ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಭಯಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದು ಡಿಸೆಂಬರ್ 16ಕ್ಕೆ 7 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 16ರಂದೇ ಕಾಮುಕರಿಗೆ ನೇಣಿನ ಕುಣಿಕೆ ಬೀಳುತ್ತದೆ ಎನ್ನಲಾಗಿತ್ತು. ಆದರೆ ಅಕ್ಷಯ್ ಸಿಂಗ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿರುವುದರಿಂದ ಗಲ್ಲು ಮತ್ತಷ್ಟು ವಿಳಂಬವಾಗಲಿದೆ.