ಬದಿಯಡ್ಕ: ಅಮಲು ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ನಡೆಯಬಾರದ ಘಟನೆಗಳು ಇಂದು ನಡೆಯುತ್ತಿದ್ದು, ಇದರ ವಿರುದ್ಧ ಎಲ್ಲರೂ ಕೈಜೋಡಿಸಿ ಜನರಲ್ಲಿ ಅರಿವನ್ನು ಮೂಡಿಸಬೇಕಿದೆ. ಸಣ್ಣಮಕ್ಕಳಿಂದ ಪ್ರಾರಂಭಿಸಿ ವಯಸ್ಕರ ತನಕ ಅಮಲು ಪದಾರ್ಥಗಳ ಚಟವನ್ನು ಹೊಂದಿದವರಿದ್ದಾರೆ. ಅಮಲು ಪದಾರ್ಥಗಳ ಸೇವನೆಯಿಂದ ದುರಂತ ಪರಿಣಾಮಗಳುಂಟಾಗುತ್ತವೆ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಕೆ.ಗೋಪಿ ತಿಳಿಸಿದರು.
ಅಮಲು ಪದಾರ್ಥಗಳ ಸೇವನೆ ವಿರುದ್ಧ ಅಬಕಾರಿ ಇಲಾಖೆಯು ರಾಜ್ಯಾದ್ಯಂತ ಹಮ್ಮಿಕೊಂಡ `ಮಾದಕ ದ್ರವ್ಯ ಮುಕ್ತ ಕೇರಳ' ಕಾರ್ಯಕ್ರಮದ ಅಂಗವಾಗಿ ಬದಿಯಡ್ಕ ಅಬಕಾರಿ ವಲಯ ಕಚೇರಿ, ಪೆರಡಾಲ ನವಜೀವನ ಪ್ರೌಢಶಾಲೆ, ಪೆರಡಾಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಬುಧವಾರ ನಡೆದ ಸೈಕಲ್ ಜಾಥಾಕ್ಕೆ ಪೆರಡಾಲ ನವಜೀವನ ಶಾಲೆಯ ಮೈದಾನದಲ್ಲಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಶಾಲೆಯಿಂದಲೇ ಇಂದು ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಅನೇಕ ಮಾದಕ ದ್ರವ್ಯಗಳ ವ್ಯಾಪಾರ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ವಿದ್ಯಾರ್ಥಿಗಳ ಮೂಲಕವೇ ಮಾದಕ ವಸ್ತುಗಳ ಸಾಗಾಟ ನಡೆದ ಘಟನೆಗಳೂ ಇವೆ. ಈ ನಿಟ್ಟಿನಲ್ಲಿ ಹೆತ್ತವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಮಾದಕ ಚಟದಿಂದ ಮನೆಮಂದಿ ದೂರವಿದ್ದರೆ ಅಲ್ಲಿನ ಮಕ್ಕಳು ಸುರಕ್ಷಿತರಾಗಿರುತ್ತಾರೆ. ಗೆಳೆತನದ ಮೂಲಕ ಮಾದಕ ಚಟ ನಮ್ಮ ಮನೆಯನ್ನು ಅಂಟಿಕೊಳ್ಳದಂತೆ ಎಚ್ಚರಿಕೆಯಿಂದಿರಬೇಕು ಎಂದು ಅವರು ವಿವಿಧ ಮಾಹಿತಿಗಳನ್ನು ನೀಡಿದರು. ಅಬಕಾರಿ ಇಲಾಖೆಯ ಅಧಿಕಾರಿಗಳಾದ ಟಿ.ವಿ.ರಾಮಚಂದ್ರನ್, ಸಿ.ಕೆ.ವಿ.ಸುರೇಶ್, ಅರುಣ್ ಎ.ಟಿ., ವಿಜಯನ್ ಪಾಲ್ಗೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯಿ ಪಿ.ಕೆ.ತಂಗಮಣಿ, ಅಧ್ಯಾಪಕರುಗಳಾದ ಯು.ಜಿ.ಶಿವಪ್ರಸಾದ್, ರಾಜೇಶ್ ಅಗಲ್ಪಾಡಿ, ಸೋಮನಾಥ, ವೆಂಕಟಕೃಷ್ಣ, ನಾರಾಯಣ, ಕೃಷ್ಣ ಯಾದವ, ವನಜ ಹಾಗೂ ಸರ್ಕಾರಿ ಪ್ರೌಢಶಾಲೆಯ ಗೋಪಾಲಕೃಷ್ಣ ಭಟ್ ನೇತೃತ್ವವನ್ನು ನೀಡಿದ್ದರು. ಮಾದಕ ದ್ರವ್ಯ ಸೇವನೆ ವಿರುದ್ಧ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಜ್ಞಾವಿಯನ್ನು ಬೋಧಿಸಲಾಯಿತು. ಬದಿಯಡ್ಕ ಪೇಟೆಯಲ್ಲಿ ನಡೆದ ಸೈಕಲ್ ಜಾಥಾದಲ್ಲಿ 45ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.