ಕುಂಬಳೆ: ಕಿದೂರು ಶ್ರೀ ಮಹಾದೇವ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ರಜತ ಮಹೋತ್ಸವ ಸಂಭ್ರಮ ಸಮಾರಂಭ ಸಂಘದ ಯಕ್ಷ ಗುರುಗಳಿಗೆ ಗುರುವಂದನೆ ಮತ್ತು ಸಂಘದ ಚಾಲಕ ಶಕ್ತಿಗಳಾದ ಹಿರಿಯರಿಗೆ ಗೌರವಾರ್ಪಣೆಗಳೊಂದಿಗೆ ಇತ್ತೀಚೆಗೆ ಕಿದೂರು ಕ್ಷೇತ್ರದ ಲಕ್ಷದೀಪೆÇೀತ್ಸವ ಸಂದರ್ಭದಲ್ಲಿ ನಡೆಯಿತು. ಗುರಿಕ್ಕಾರ ಮಹಾಲಿಂಗ ಭಟ್ ದೀಪಜ್ವಲನಗೈದ ಸಮಾರಂಭದಲ್ಲಿ ಕ್ಷೇತ್ರತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಆಶೀರ್ವಚನಗೈದರು.
25ವರ್ಷಗಳ ಹಿಂದೆ ಸಂಘದ ಸದಸ್ಯರಿಗೆ ಯಕ್ಷನಾಟ್ಯ ಕಲಿಸಿ, ತರಬೇತಿ ಇತ್ತ ಹಿರಿಯ ಕಲಾವಿದ ಉಂಡೆಮನೆ ಶ್ರೀಕೃಷ್ಣ ಭಟ್ ಮತ್ತು ಹಾಲಿ ಉದಯೋನ್ಮುಖ ಬಾಲ ಕಲವಿದರಿಗೆ ಯಕ್ಷನಾಟ್ಯ ತರಬೇತಿ ಇತ್ತು ರಂಗಪ್ರವೇಶಕ್ಕೆ ಅಣಿಗೊಳಿಸಿದ ರಾಮ ಸಾಲಿಯಾನ್ ಮಂಗಲ್ಪಾಡಿ ಅವರನ್ನು ಕಲಾರ್ಯಕ್ರಮದಲ್ಲಿ ಗುರುವಂದನೆಗಳೊಂದಿಗೆ ಅಭಿನಂದಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರ.ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಯಕ್ಷಗಾನದ ಸಾಂಪ್ರದಾಯಿಕತೆ ಮತ್ತು ಪರಂಪರೆ ಸಂರಕ್ಷಣೆಯಲ್ಲಿ ಹವ್ಯಾಸಿ ಕಲಾವಿದರು ಮತ್ತು ಸಂಘಟನೆಗಳ ಕೊಡುಗೆ ಅತ್ಯಮೂಲ್ಯ. ಹೊಸ ಪೀಳಿಗೆಯನ್ನು ರೂಪಿಸಿ, ಕೈದಾಟಿಸುವ ಸಂದರ್ಭದಲ್ಲಿ ಕಲೆಯ ಪರಂಪರೆ, ಶಾಶ್ತ್ರೀಯತೆಯತ್ತ ಗಮನ ಹರಿಸಿ ಎಳೆಯರಿಗೆ ಸರಿಯಾದ ಮಾರ್ಗದರ್ಶನಗಳ ಅಗತ್ಯವಿದೆ ಎಂದು ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಹೇಳಿದರು.
ಪ್ರಸ್ತುತ ಸಂದರ್ಭ ಊರಿನ ಹಿರಿಯ ಕಲಾವಿದ ಮಡಂದೂರು ತಿಮ್ಮಪ್ಪ ರೈ, ಪ್ರಸಂಗಕರ್ತ ಹಾಗೂ ಕಿದೂರು ಯಕ್ಷಗಾನ ಸಂಘದ ಉಗಮಕ್ಕೆ ಪ್ರೇರಣೆ, ಪೆÇ್ರೀತ್ಸಾಹ ನೀಡಿದ ರಾಮಕೃಷ್ಣಯ್ಯ ಕಂಬಾರು ಅವರನ್ನು ಸಮ್ಮಾನಿಸಲಾಯಿತು.
ಕ್ಷೇತ್ರ ಮೊಕ್ತೇಸರ ಶ್ರೀಕೃಷ್ಣ ವಿಶ್ವೇಶ್ವರ ಶರ್ಮ, ಕಠಾರ ಲಕ್ಷ್ಮೀ ನಾರಾಯಣ ಭಟ್, ಪಿ.ನರಹರಿ ಮಾಸ್ತರ್ ಶುಭಾಸಂನೆಗೈದರು. ಸಂಘದ ಕೋಶಾಧಿಕಾರಿ ವೆಂಕಪ್ಪ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ರಾಮ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರೆಲ್ಲರೂ ವಿವಿಧ ಕೈಂಕರ್ಯಗಳೊಂದಿಗೆ ಉಪಸ್ಥಿತರಿದ್ದರು. ಬಳಿಕ ಸಂಘದ ಆಶ್ರಯದಲ್ಲಿ ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿ ಕಲಾವಿದರಿಂದ, ಯಕ್ಷಗುರು ರಾಮ ಸಾಲ್ಯಾನ್ ನಿರ್ದೇಶನದಲ್ಲಿ `ಸುದರ್ಶನ ವಿಜಯ' ಆಖ್ಯಾನದ ಮಕ್ಕಳ ಬಯಲಾಟ ಪ್ರದರ್ಶನಗೊಂಡಿತು. ಅನಂತರ ಸಂಘದ ಸದಸ್ಯರು ಮತ್ತು ಆಹ್ವಾನಿತ ಅತಿಥಿ ಕಲಾವಿದರಿಂದ `ಪುಂಚದ ಬಾಲೆ' ಎಂಬ ತುಳು ಯಕ್ಷಗಾನ ಪ್ರಸ್ತುತಗೊಂಡಿತು.