ಕಾಸರಗೋಡು: ಪ್ರತಿಫಲಾಪೇಕ್ಷೆಗಳಿಲ್ಲದೆ, ಜಗದ ಚರಾಚರಗಳ ಚಲನೆಗೆ ಕಾರಣನಾದ ಸೂರ್ಯನಂತೆ ಸಾಮಾಜಿಕ ಚೈತನ್ಯಕ್ಕೆ ಪ್ರೇರಣೆಯಾಗಿರುವವರು ಮಾಧ್ಯಮಗಳಾಗಿವೆ. ಕರ್ತವ್ಯ ಬದ್ದತೆ, ಮಾನವೀಯತೆಗಳ ಆಂತರ್ಯ ಶಕ್ತಿಯ ಪ್ರತಿನಿಧಿಗಳು ಸಮೂಹ ಮಾಧ್ಯಮಗಳಾಗಿದ್ದು, ಆಧುನಿಕ ಸವಾಲುಗಳ ಮಧ್ಯೆ ಇನ್ನೂ ಜನಮನದಲ್ಲಿ ಕ್ರಿಯಾತ್ಮಕತೆಯನ್ನು ಉಂಟುಮಾಡುವಲ್ಲಿ ಸಕ್ರಿಯವಾಗಿದೆ ಎಂದು ಕಾಸರಗೋಡು ಶಾಶಕ ಎನ್.ಎ.ನೆಲ್ಲಿಕುನ್ನು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ನೇತೃತ್ವದಲ್ಲಿ ಕಾಸರಗೋಡು ನಗರಸಭಾ ಕಿರು ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುಭಾಷಾ ಸಂಗಮ ಭೂಮಿಯಾದ ಗಡಿನಾಡು ಕಾಸರಗೋಡಿನ ಸರ್ವಾಂಗೀಣ ಅಭಿವೃದ್ದಿಯ ಸುಧೀರ್ಘ ಕಾಲದ ಬೆಳವಣಿಗೆಯ ಹಿಂದೆ ಇಲ್ಲಿಯ ಮಾಧ್ಯಮಗಳ ಕೊಡುಗೆ ಅಪಾರವಾದುದಾಗಿದೆ. ಸ್ಥಳೀಯ ಸಮಸ್ಯೆ, ಆಡಳಿತ ವೈಫಲ್ಯಗಳ ಸಹಿತ ಪ್ರೇರಣದಾಯಿ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ಪ್ರಬುದ್ದತೆಯಿಂದ ಕಾರ್ಯನಿರ್ವಹಿಸಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪತ್ರಕರ್ತರ ಅಪೂರ್ವ ಕೊಡುಗೆಗಳು ಸ್ತುತ್ಯರ್ಹವಾದುದು ಎಂದು ಅವರು ಬೊಟ್ಟುಮಾಡಿದರು. ಬದಲಾದ ಕಾಲಮಾನದಲ್ಲಿ ಮಾಧ್ಯಮ ಕ್ಷೇತ್ರ ಸಂಕಷ್ಟಕ್ಕೊಳಗಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಕಾರ್ಯವೆಸಗುವ ಲಕ್ಷಾಂತರ ಪತ್ರಕರ್ತರು, ಅವರ ಕುಟುಂಬಗಳು ಅತಂತ್ರವಾಗುವ ಭೀತಿಯಲ್ಲಿದೆ. ಜನತಂತ್ರದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಅತಂತ್ರತೆಯು ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಜೊತೆಗೆ ಅರಾಜಕತೆಗೆ ಕಾರಣವಾಗುವುದು ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಸವಲತ್ತುಗಳು ಸಾಮಾನ್ಯ ಪತ್ರಕರ್ತರಿಗೆ ಲಭ್ಯವಾಗಿಸುವಲ್ಲಿ ವಿಧಾನ ಸಭೆಯಲ್ಲಿ ತಾನು ಧ್ವನಿಯೆತ್ತುವುದಾಗಿ ಭರವಸೆ ನೀಡಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ನೀರ್ಚಾಲು ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್(ಐಜೆಯು) ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಜಿ.ಪ್ರಭಾಕರನ್, ಕೆಜೆಯು ರಾಜ್ಯ ಕಾರ್ಯದರ್ಶಿ ಕೆ.ಸಿ.ಸ್ಮಿಜನ್, ಪ್ರಕಾಶನ್ ಪಯ್ಯನ್ನೂರ್, ರಾಜ್ಯ ಸಮಿತಿ ಸದಸ್ಯ ನಾಸರ್ ಸಿ.ಕೆ., ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಶ್ರೀನಿ ಆಲಕ್ಕೋಡ್ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಹಿರಿಯ ನಾಟಿ ವೈದ್ಯ ಮಾತ್ತುಕುಟ್ಟಿ ವೈದ್ಯರ್, ಸಾಮಾಜಿಕ ಕಾರ್ಯಕರ್ತರಾದ ಅಬು ತಮಾಂ, ಕೆ.ಮೊಹಮ್ಮದ್ ಹನೀಫ್, ಕೆ.ವಿ. ಅಬುಯಾಸರ್ ಅವರನ್ನು ಗೌರವಿಸಲಾಯಿತು. ಜೊತೆಗೆ ಹಿರಿಯ ಪತ್ರಕರ್ತರಾದ ಅಶೋಕ ನೀರ್ಚಾಲು(ದೀಪಿಕ), ಗಂಗಾಧರ ಪಳ್ಳತ್ತಡ್ಕ(ಕಾರವಲ್), ಟಿ.ಕೆ.ರಾಘವನ್(ಮಲೆಯಾಳ ಮನೋರಮ), ಅಪೂರ್ವ ಎನ್.ರಾವ್(ಬಿಎನ್‍ಸಿ ನ್ಯೂಸ್), ಅಬ್ದುಲ್ಲ ಕುಂಬಳೆ(ಕುಂಬಳೆ) ಲತೀಫ್ ಉಪ್ಪಳ(ಕಾಸರಗೋಡು ವಾರ್ತಾ) ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಕುಂಬಳೆ ಸ್ವಾಗತಿಸಿ, ವಂದಿಸಿದರು. ಲತೀಫ್ ಮಾಸ್ತರ್ ಕುಂಬಳೆ ಅಭಿನಂದನಾ ಭಾಷಣ ಮಾಡಿದರು. ಸಮ್ಮೇಳನದ ಭಾವಾಗಿ ಬೆಳಿಗ್ಗೆ ಸಮ್ಮೇಳನ ನಗರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ವಿ.ರಾಘವನ್ ಧ್ವಜಾರೋಹಣ ನಿರ್ವಹಿಸಿದರು. ಬಳಿಕ ಸದಸ್ಯರ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಟಿ.ವಿ.ರಾಘವನ್ ಅಧ್ಯಕ್ಷತೆ ವಹಿಸಿದ್ದರು. ಐಜೆಯು ಅಖಿಲ ಭಾರತ ಕಾರ್ಯದರ್ಶಿ ಜಿ.ಪ್ರಭಾಕರನ್ ಉದ್ಘಾಟಿಸಿದರು. ಸಿ.ಕೆ.ನಾಸರ್, ಕೆ.ಸಿ.ಸ್ಮಿಜನ್ ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ನಿರ್ವಹಿಸಿದರು. ಕೆಜೆಯು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಘಲನ್ನು ಈ ಸಂದರ್ಭ ಆರಿಸಲಾಯಿತು.