ಕಾಸರಗೋಡು: ಸಮಾಜದಲ್ಲಿ ಹಿಂದುಳಿದಿರುವ ಜನಾಂಗಗಳ ಮಕ್ಕಳಿಗೆ ಶಿಕ್ಷಣ ಮೂಲಕ ಪ್ರಧಾನವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಮೂಲಕ ಕಾಸರಗೋಡು ಜಿಲ್ಲೆಯ ಪರಪ್ಪ ಬ್ಲಾಕ್ ಪಂಚಾಯತಿ ಇತರರಿಗೆ ಮಾದರಿಯಾಗಿದೆ.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಜಾರಿಗೊಳಿಸುವ `ಪಠನ ಮುರಿ(ಕಲಿಕಾ ಕೊಠಡಿ)' ಯೋಜನೆಯಲ್ಲಿ ಅಳವಡಿಸಿ ಪರಪ್ಪ ಬ್ಲಾಕ್‍ನಲ್ಲಿ 29 ಕಲಿಕಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳ ಕಾಮಗಾರಿ ಪೂರ್ಣಗೊಂಡಿದೆ. 2017-18 ವರ್ಷದಲ್ಲಿ 9 ಕೊಠಡಿಗಳು, 2018-19ನೇ ವರ್ಷದಲ್ಲಿ 20 ಕಲಿಕಾ ಕೊಠಡಿಗಳನ್ನು ನಿರ್ಮಿಸಲಾಗಿದೆ. 2019-20ನೇ ವರ್ಷದಲ್ಲಿ ಮಂಜೂರುಗೊಂಡಿರುವ 24 ಕಲಿಕಾ ಕೊಠಡಿಗಳ ನಿರ್ಮಾಣ ಚುರುಕಿನಿಂದ ನಡೆಯುತ್ತಿದೆ. ಇವುಗಳಲ್ಲಿ 4 ಕಲಿಕಾ ಕೊಠಡಿಗಳು ಪರಿಶಿಷ್ಟ ಜಾತಿ ಜನಾಂಗದ ಚೊಕ್ಲಿ ವಿಭಾಗದ ಮಕ್ಕಳಿಗಾಗಿ ಮಂಜೂರುಗೊಂಡಿದೆ. ಈ ಕೊಠಡಿಗಳೊಂದಿಗೆ ಈ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವೂ ಉಚಿತವಾಗಿ ಲಭಿಸುತ್ತಿದೆ. ಪನತ್ತಡಿ, ಕೋಡೋಂ-ಬೇಳೂರು, ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತಿಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಕ್ಕಳ ತರಗತಿ, ಕೌಟುಂಬಿಕ ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ಪರಿಶೀಲಿಸಿ ಈ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಪರಿಶೀಲನೆ ನೀಡಲಾಗುತ್ತದೆ.
ಏನಿದು ಕಲಿಕಾ ಕೊಠಡಿ ಯೋಜನೆ ? :
ಕಲಿಯುತ್ತಲೇ ಬೆಳೆಯಲು ಪೂರಕ `ಪಠನ ಮುರಿ(ಕಲಿಕಾಕೊಠಡಿ)' ಯೋಜನೆ. ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಜನಾಂಗಗಳ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಒದಗಿಸಲಾಗಿರುವ ಯೋಜನೆಯೇ `ಪಠನ ಮುರಿ(ಕಲಿಕಾಕೊಠಡಿ)'. ಈ ಯೋಜನೆಯ ಪ್ರಕಾರ 800 ಚದರಡಿ ವಿಸ್ತೀರ್ಣ ಹೊಂದಿರುವ ಮನೆಗಳೊಂದಿಗೆ ಸೇರಿ 120 ಚದರ ಅಡಿಯ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಕೆಲವೆಡೆ ಮನೆಯ ಮೇಲ್ಭಾಗದಲ್ಲಿ (ಮೇಲಂತಸ್ತಿನಲ್ಲಿ) ಕೊಠಡಿ ನಿರ್ಮಿಸಲಾಗುವುದು.
ನಿರ್ಮಾಣದ ಮೊದಲ ಹಂತದ ಮೊಬಲಗಿನ ಶೇ.15, ದ್ವಿತೀಯ ಹಂತದ ಮೊಬಲಗಿನ ಶೇ.30, ಮೂರನೇ ಹಂತದ ಮೊಬಲಗಿನ ಶೇ.40, ನಾಲ್ಕನೇ ಹಂತದಲ್ಲಿ ಬಾಕಿಯುಳಿದ ಶೇ.15 ನೀಡಲಾಗುವುದು. ಇದರಲ್ಲಿ ಮೂರು ಹಂತಗಳಲ್ಲಿ ಸಂಬಂಧಪಟ್ಟ ಪರಿಶಿಷ್ಟ ಜಾತಿ ಪ್ರಮೋಟರರ ಅವಲೋಕನ ವರದಿಯ ಹಿನ್ನೆಲೆಯಲ್ಲಿ ನಿಧಿ ಮಂಜೂರು ಮಾಡಲಾಗುವುದು. ಕೊನೆಯ ಹಂತದಲ್ಲಿ ಸಿಬ್ಬಂದಿ ನೇರವಾಗಿ ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೊಬಲಗು ಮಂಜೂರು ಮಾಡುವರು. ನೆಲಕ್ಕೆ ಟೈಲ್ಸ್ ಹಾಸಲಾಗಿದ್ದು, ವಿದ್ಯುದೀಕರಣ ನಡೆಸಿ ಲೈಟ್, ಫ್ಯಾನ್ ಒದಗಿಸಲಾಗುವುದು. ಎರಡು ಕಿಟಿಕಿಗಳೂ, ಪುಸ್ತಕ ಇರಿಸಲು ಕಪಾಟು, ಕುರ್ಚಿ, ಮೇಜು ನೀಡಲಾಗುವುದು.
ಈ ಯೋಜನೆ ಪ್ರಕಾರದ ಕೊಠಡಿಗಳನ್ನು ನಿರ್ಮಿಸುವಲ್ಲಿ ಪರಪ್ಪ ಬ್ಲಾಕ್ ಪಂಚಾಯತಿ ಯಶಸ್ವಿಯಾಗಿದೆ. ಕಲಿಯಲು ಅತ್ಯುತ್ತಮ ಸೌಲಭ್ಯಗಳು ಮನೆಯಲ್ಲೇ ಲಭಿಸಿದಾಗ ವಿದ್ಯಾರ್ಥಿಗೆ ಕಲಿಕಾಸಕ್ತಿ ಹೆಚ್ಚುತ್ತದೆ. ಈ ಮೂಲಕ ಅವರು ಬದುಕಿನಲ್ಲಿ ಏಳಿಗೆ ಕಾಣಲು ಸಾಧ್ಯ ಎಂಬುದು ಈ ಯೋಜನೆಯ ಉದ್ದೇಶ. ಈ ಬ್ಲಾಕ್ ಮಟ್ಟದಲ್ಲಿ ಕಲಿಕಾ ಕೊಠಡಿ ಯೋಜನೆಯ ಫಲಾನುಭವಿಗಳಾದ ಬಹುತೇಕ ಮಟ್ಟದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿದೆ ಎಂದು ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ಹಸೈನಾರ್ ತಿಳಿಸಿದ್ದಾರೆ.