ನವದೆಹಲಿ: ದೇಶದ ಮಾರುಕಟ್ಟೆಗಳಲ್ಲಿ ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಟರ್ಕಿಯಿಂದ 11000 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎನ್ ಟಿಸಿಗೆ ಆದೇಶಿಸಿದೆ.
ಎಂಎನ್ ಟಿಟಿ ಈಗಾಗಲೇ ಈಜಿಪ್ಟ್ ನಿಂದ 6090 ಮೆಟ್ರಿಕ್ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಸರ್ಕಾರದ ಹೊಸ ಆದೇಶದಿಂದಾಗಿ ದೇಶದಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸರ್ಕಾರ ಭಾವಿಸಿದೆ. ಮತ್ತೊಂದೆಡೆ, ದೇಶದಲ್ಲಿನ ಈರುಳ್ಳಿ ಬೆಲೆ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ತಂಡವೊಂದನ್ನು ರಚಿಸಲಾಗಿದೆ. ಸಚಿವರ ಈ ಸಮಿತಿಯಲ್ಲಿ ಹಣಕಾಸು ಖಾತೆ ಸಚಿವರು, ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಕೃಷಿ ಮತ್ತು ಸಾರಿಗೆ ಸಚಿವರ ಸದಸ್ಯರಾಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 75 ರೂ.ನಿಂದ 120 ರೂ.ಗೆ ಮಾರಾಟವಾಗುತ್ತಿದ್ದು, ಬೆಲೆಗಳನ್ನು ತಗ್ಗಿಸಲು, ಈರುಳ್ಳಿ ಆಮದಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.
ಈರುಳ್ಳಿ ಆಮದಿನ ಮೇಲೆ ನಿಷೇಧ ವಿಧಿಸಿದ್ದ ಕೇಂದ್ರ ಸಂಪುಟ, ಈಗ 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ಅನುಮತಿ ನೀಡಿದೆ. ಆಮದು ಮಾಡಿಕೊಂಡ ಈರುಳ್ಳಿಯನ್ನು ರಾಜ್ಯಗಳಿಗೆ ಕೆ.ಜಿ.ಗೆ 50ರಿಂದ 60 ರೂ.ಗೆ ಪೂರೈಸಲು ನಿರ್ಧರಿಸಿದೆ.