ನವದೆಹಲಿ: ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.
ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳು ಸಂಚಾರ ಮಾಡಲಿದ್ದು, ರೈಲ್ವೇಯಲ್ಲಿ 22,500 ಕೋಟಿ ರೂಪಾಯಿ ಹೂಡಿಕೆ ಆಹ್ವಾನಿಸುವ ಆಶಯ ಸಹ ಹೊಂದಲಾಗಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರೈಲ್ವೇ ಮಂಡಳಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ದೇಶದ ಹಲವು ಕಡೆ ಖಾಸಗಿ ಹೂಡಿಕೆ ಆಹ್ವಾನಿಸಲು ನಿರ್ಧರಿಸಿದ್ದು ಸದ್ಯ ಈ ಕುರಿತು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ.
ಹೂಡಿಕೆಗಾಗಿ ಟ್ರಾವೆಲ್ಸ್ ಕಂಪೆನಿಗಳು, ಇತರ ಕಂಪೆನಿಗಳು, ಟೂರ್ ಆಪರೇಟರ್ಗಳನ್ನು ಆಹ್ವಾನಿಸಲಾಗುತ್ತಿದ್ದು, ಕನಿಷ್ಠ 12 ರೈಲುಗಳಿಗೆ, ಗರಿಷ್ಠ 30 ರೈಲುಗಳಿಗೆ ಬಿಡ್ ಸಲ್ಲಿಸಹುದಾಗಿದೆ. ಸದ್ಯ ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉತ್ತೇಜನಗೊಂಡ ರೈಲ್ವೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ರೈಲುಗಳನ್ನು ಓಡಿಸಲು ಗುತ್ತಿಗೆ ನೀಡಲು ಮುಂದಾಗಿದ್ದು, ರೈಲುಗಳ ಸಂಚಾರದಿಂದ ಬರುವ ಆದಾಯದಲ್ಲಿ ಕಂಪೆನಿಗಳು ರೈಲ್ವೆ ಇಲಾಖೆಗೆ ಆದಾಯದ ಪಾಲು ಸಹ ಕೊಡಬೇಕಾಗುತ್ತದೆ.