ಕಾಸರಗೋಡು: ಒಂದಿಂಚೂ ಬಂಜರು ಭೂಮಿಯಿಲ್ಲ.. ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಘಟಕವಿದೆ....ಪಂಚಾಯತ್ ನಲ್ಲೇ ಉತ್ಪಾದಿಸಿದ ಬ್ರಾಂಡೆಡ್ ಉತ್ಪನ್ನಗಳು ಮಾರುಕಟ್ಟೆ ತಲಪಿವೆ..ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಲಗ್ರಾಮಸಭೆಗಳು ನಡೆಯುವ ಗ್ರಾಮಪಂಚಾಯತ್...ಇಷ್ಟೆಲ್ಲ ವಿಶೇಷತೆಗಳು ಜಿಲ್ಲೆಯ ಬೇಡಡ್ಕ ಗ್ರಾಮಪಂಚಾಯತನ್ನು ಮುಖ್ಯಮಂತ್ರಿ ಅವರ ಹರಿತ ಪ್ರಶಸ್ತಿಗೆ ಭಾಜನವಾಗುವಂತೆ ಮಾಡಿವೆ.
ಮಣ್ಣನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿ ಅದರಲ್ಲಿಳಿದು ಉತ್ತು ಬಿತ್ತು ಬಂಗಾರ ಬೆಳೆದು ಕೃಷಿಯನ್ನು ಉತ್ಸವವಾಗಿಸಿದ ಪಂಚಾಯತೊಂದು ಗಡಿನಾಡು ಕಾಸರಗೋಡಿನಲ್ಲಿದೆ ಎಂಬುದೇ ಇಲ್ಲಿನ ವಿಶೇಷ ಆಕರ್ಷಣೆ. ಅದು ಬೇಡಡ್ಕ. ಕಳೆದ 4 ವರ್ಷಗಳಿಂದ ಈ ಪಂಚಾಯತ್ ಇತರರ ಗಮನ ಸೆಳೆಯುತ್ತಿರುವುದು ತನ್ನ ವೈವಿಧ್ಯಮಯ ಚಟುವಟಿಕೆಗಳಿಂದ ಮತ್ತದರ ಸಕಾರಾತ್ಮಕ ಫಲಿತಾಂಶಗಳಿಂದ.
ಬಂಜರಿನಲ್ಲೂ ಚಿನ್ನ ಬೆಳೆದ ನಾಡು:
ಒಂದಿನಿತೂ ಬಂಜರು ಇಲ್ಲದ ಭೂಮಿಯಿರುವ ಪಂಚಾಯತ್ ಎಂಬ ಹೆಗ್ಗಳಿಕೆ ಸುಮ್ಮನೇ ಲಭಿಸಿದ್ದಲ್ಲ. 2016 ರಲ್ಲಿ 70 ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದ್ದ ಕಡೆ ಇಂದು 100 ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದೆ. ಕೃಷಿ ವಲಯದಲ್ಲಿ ಇಲ್ಲಿನ ಮಂದಿ ತೋರುತ್ತಿರುವ ಆಸಕ್ತಿಯ ಪರಿಣಾಮ ಇಂದು ಭತ್ತ ಮಾತ್ರವಲ್ಲದೆ, ತರಕಾರಿ, ತೆಂಗು, ಅಡಕೆ ವಲಯಲ್ಲೂ ಸಾಧನೆ ಮುಂದುವರಿಯುತ್ತಿದೆ. ಜೊತೆಗೆ ನೀರಾವರಿಗೆ ಪಂಪ್ ಸೆಟ್, ಜೈವಿಕ ಗೊಬ್ಬರ, ಗದ್ದೆಗಳಲ್ಲಿ ಬಳಸುವ ಯಂತ್ರೋಪಕರಣಗಳ, ಗೇರು ಸಸಿ ವಿತರಣೆ ಸೌಲಭ್ಯ, ಕೃಷಿ ಕ್ರಿಯಾ ಸೇನೆಯ ರಚನೆ, ಕೂಲಿ ವೆಚ್ಚದಲ್ಲಿ ಸಬ್ಸಿಡಿ, ಪಶುಸಂಗೋಪನೆಗೆ ಸಹಾಯ, ಹಾಲಿಗೆ ಇನಸೆಂಟೀವ್, ಹಾಲಿನ ವಿವಿಧ ಉತ್ಪನ್ನಗಳ ಮಾರುಕಟ್ಟೆಗೆ ನನಾ ಕಾರ್ಯಕ್ರಮಗಳು ಇತ್ಯಾದಿಗಳಿಗೆ ಪಂಚಾಯತ್ ಆದ್ಯತೆ ನೀಡುತ್ತಿದೆ.
ಈ ಹಂತ ಹಂತದ ಬೆಳವಣಿಗೆ ಕುತೂಹಲಕಾರಿಯಾಗಿದೆ. ಮೊದಲ ಹಂತದಲ್ಲಿ ಗ್ರಾಮಪಂಚಾಯತ್ ಮಟ್ಟದ ಸಮಿತಿ ರಚಿಸಲಾಗಿತ್ತು. ಅದರ ಮುಂದುವರಿಕೆಯಾಗಿ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲಾಗಿತ್ತು. ಈ ಮೂಲಕಕೃಷಿಯ ಚಟುವಟಿಕೆಗಳನ್ನು ವಹಿಸಿಕೊಳ್ಳಲಾಗಿತ್ತು. ಸಾಮಾಜಿಕ,ರಾಜಕೀಯ, ಸಹಕಾರಿ, ಸ್ವಯಂ ಸೇವಾ ವಲಯಗಳಸಹಾಯ ಈ ನಿಟ್ಟಿನಲ್ಲಿ ಪಡೆಯಲಾಗುತ್ತಿದೆ. ಕೃಷಿಕರನ್ನು ಸೇರಿಸಿಕೊಂಡು ಸಭೆಗಳನ್ನು ನಡೆಸಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ತಲಾ 15 ಸದಸ್ಯರನ್ನು ಸೇರಿಸಿ ಕೃಷಿಕ್ರಿಯಾ ಸೇನೆಗಳನ್ನು ರಚಿಸಲಾಗಿತ್ತು. 2 ಜೈವಿಕ ಕೃಷಿ ಸಮಿತಿಗಳನ್ನು ಇದಕ್ಕೆ ಪೂರಕವಾಗಿ ರಚಿಸಲಾಗಿತ್ತು.
ಕೃಷಿ ರಂಗದಲ್ಲಿ ನಡೆಸಿದ್ದು ಒಕ್ಕೂಟದ ಯಜ್ಞ :
ಪಂಚಾಯತ್ ಮಟ್ಟದ ಕುಟುಂಬಶ್ರೀ ನೆರೆಕೂಟಗಳು 30 ಸೆಂಟ್ಸ್ ಗೆ ಕಡಿಮೆಯಿಲ್ಲದ ರೀತಿ ಕೃಷಿ ನಡೆಸುವಂತೆ ಮೊದಲ ಆದೇಶ ನೀಡಲಾಗಿತ್ತು. ಪಂಚಾಯತ್ ಮಟ್ಟದ ಸಹಕಾರಿ ಸಂಘಗಳ ಮೂಲಕ ಈ ಕೃಷಿ ಅಭಿವೃದ್ಧಿಗೆ ಯತ್ನಿಸಲಾಗಿತ್ತು. 2019 ರಲ್ಲಿ ಬೇಡಡ್ಕ ಫಾರ್ಮರ್ಸ್ ಸರ್ವೀಸ್ ಕೋ ಆಪರೇಟಿವ್ ಸಹಕಾರಿ ಬ್ಯಾಂಕ್ 2 ಎಕ್ರೆ ಜಾಗದಲ್ಲಿ ಭತ್ತದ ಕೃಷಿ, ಬೇಡಗಂ ಮಹಿಳಾ ಸಂಘ ಕಳೆದ 2 ವರ್ಷಗಳಲ್ಲಿ 2.5 ಎಕ್ರೆ ಜಾಗದಲ್ಲಿ ಜೈವಿಕ ತರಕಾರಿ ಕೃಷಿ ನಡೆಸಿ ಯಶಸ್ವಿಯಾಗಿದೆ. ಯುವಜನ ಸಂಘಟನೆಗಳ ಸಹಾಯದಿಂದ ಕಾಡುಪೆÇದೆ ನಿವಾರಣೆ, ನೇಜಿನೆಡುವಿಕೆ, ಕೊಯ್ಲು ಇತ್ಯಾದಿಯನ್ನು ಪಂಚಾಯತ್ ನ ನೇತೃತ್ವದಲ್ಲಿ ನಡೆಸಲಾಗಿದೆ. ಇಲ್ಲಿನ ವಿವಿಧ ಶಾಲೆಗಳಲ್ಲಿ ರಕ್ಷಕ-ಶಿಕ್ಷಕ ಸಂಘದ ಸಹಾಯದೊಂದಿಗೆ ಜೈವಿಕ ತರಕಾರಿ ಬೆಳೆಸಲಾಗಿದೆ. ಇಕೋಶಾಪ್, ವಿ.ಎಫ್.ಪಿ.ಸಿ.ಕೆ. ಸಂತೆ, ವಾರಸಂತೆ, ಎ-ಗ್ರೇಡ್ ಕ್ಲಸ್ಟರ್ ಇತ್ಯಾದಿ ಮಾರುಕಟ್ಟೆ ಸೌಲಭ್ಯಗಳೂ ಈ ಬೆಳವಣಿಗೆಗೆ ಪೂರಕವಾದುವು. ಎಲ್ಲ ಚಟುವಟಿಕೆಗಳೂ ಸ್ವಾವಲಬಿಯಾಗಿಯೇ ನಡೆದ ಹಿನ್ನೆಲೆಯಲ್ಲಿ ಬೇಡಗಂ ರೈಸ್, ಬೇಡಗಂ ಜೈವಿಕ ತರಕಾರಿ, ಬೇಡಗಂ ಕೊಡೆ, ಬೇಡಗಂ ಫುಡ್ಸ್ ಸಹಿತ ಉತ್ಪನ್ನಗಳು ಬ್ರಾಂಡೆಡ್ ಆಗಿ ಮೌಲ್ಯ ಪಡೆದಿವೆ.
ತ್ಯಾಜ್ಯಗಳಿಗೆ ಶಾಶ್ವತ ಗುಡ್ ಬೈ:
ತ್ಯಾಜ್ಯ ಸಂಸ್ಕರಣೆಗೆ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈ ಪಂಚಾಯತ್ ಮಟ್ಟದಲ್ಲಿ ತ್ಯಾಜ್ಯಗಳಿಗೆ ಶಾಶ್ವತ ಪರಿಹಾರವಾಗಿದೆ. ಮೊದಲ ಹಂತದಲ್ಲಿ ಜನಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ ಹರತಾಳ, ಶುಚಿತ್ವ ಸಂದೇಶ ಪಾದಯಾತ್ರೆಗಳು, ಶುಚಿತ್ವ ದೀಪ ಪ್ರಜ್ವಲನ ಇತ್ಯಾದಿ ಈ ನಿಟ್ಟಿನಲ್ಲಿ ಜರುಗಿದುವು. ಇದರ ಅಂಗವಾಗಿಯೇ ನಗರ ಶುಚೀಕರಣ, ಪಂಪ್ ಸೆಟ್ ಕ್ಲಿಯರೆನ್ಸ್ ಮೊದಲಾದುವು ಜರುಗಿದುವು.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹರಿತ ಕ್ರಿಯಾ ಸೇನೆ ರಚಿಸಿದ ಹೆಗ್ಗಳಿಕೆ ಬೇಡಡ್ಕ ಗ್ರಾಮಪಂಚಾಯತ್ ಗೆ ಸಲ್ಲುತ್ತದೆ. ಇದರ ಅಂಗವಾಗಿ ಪ್ರತಿ ವಾರ್ಡ್ ನಲ್ಲಿ ಒಂದು, ಎರಡು ಗುಂಪುರಚಿಸಿ ಮನೆ ಮನೆ ಸಂದರ್ಶನ ನಡೆಸಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ನೆಲ್ಲಿಯಡ್ಕದ ಶ್ರೆಡ್ಡಿಂಗ್ ಕೇಂದ್ರಕ್ಕೆ ರವಾನಿಸಿ ಸಂಸ್ಕರಣೆ ನಡೆಸಲಾಗುತ್ತಿದೆ.
ಕುಟುಂಬಶ್ರೀ ನೆರೆಕೂಟಗಳ ಮೂಲಕಹರಿತ ಕ್ರಿಯಾ ಸೇನೆ ಸದಸ್ಯರ ಆಯ್ಕೆ ನಡೆಯುತ್ತಿದೆ. ಆಯ್ಕೆಗೊಂಡವರನ್ನು, ಸಿ.ಡಿ.ಎಸ್. ಕಾರ್ಯಕರ್ತರನ್ನು, ಜನಪ್ರತಿನಿಧಿಗಳನ್ನು ಸಮಿತಿ ಸದಸ್ಯರನ್ನಾಗಿಸಲಾಗುವುದು. ಇವರು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುವರು. ಇದರ ಅಂಗವಾಗಿ ಮೆರವಣಿಗೆ, ಪಾದಯಾತ್ರೆ ಇತ್ಯಾದಿಗಳನ್ನು ಈಗಾಗಲೇ ತಮ್ ಕ್ಷೇತ್ರಗಳಲ್ಲಿ ನಡೆಸಿದ್ದಾರೆ. ಇವರಲ್ಲಿ 60 ಮಂದಿಗೆ ಈಗಾಗಲೇ ಜಿಲ್ಲಾ ಮಿಷನ್, ಶುಚಿತ್ವ ಮಿಷನ್, ಕ್ಲೀನ್ ಕೇರಳ ಕಂಪನಿ ಸಹಿತ ಸಮಸ್ಥೆಗಳಿಂದ ಪರಿಣತ ತರಬೇತಿ ನೀಡಲಾಗಿದೆ.
ಈಗ ಪಂಚಾಯತ್ ನಲ್ಲಿ 8424 ಮನೆಗಳಿಂದ ಅಜೈವಿಕ ತ್ಯಾಜ್ಯ ಸಂಗ್ರಹಿಸಲಾಗಿದೆ. 420 ಅಂಗಡಿಗಳಿಂದ, 71 ಸಂಸ್ಥೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ 20 ರೂ. ಯೂಸರ್ ಶುಲ್ಕವಾಗಿ ಪಡೆಯಲಾಗುತ್ತದೆ. ಸಂಸ್ಥೆಗಳಿಂದ 30 ರೂ. ಪಡೆಯಲಾಗುತ್ತಿದೆ. ಇಲ್ಲಿನ 17 ವಾರ್ಡ್ ಗಳಲ್ಲಿ ಶುಚಿತ್ವ ಪೆಟ್ಟಿಗೆಗಳು ಎಂಬ ಹೆಸರಲ್ಲಿ ಒಟ್ಟು 81 ಸ್ಥಳೀಯ ಮೆಟೀರಿಯಲ್ ಸಂಗ್ರಹ ಸೌಲಭ್ಯ ಸ್ತಾಪಿಸಲಾಗಿದೆ. ಪಂಚಾಯತ್ ನ ಪ್ರಧಾನ 8 ಕೇಂದ್ರಗಳಲ್ಲಿ ಬಾಟಲಿ ಸಂಗ್ರಹ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಂಗ್ರಹವಾಗುವ ಬಾಟಲಿಗಳನ್ನು ಶ್ರಡ್ಡಿಂಗ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಪಂಚಾಯತ್ ಮಟ್ಟದಲ್ಲಿ 2016 ರಲ್ಲಿ ಹಸುರು ನೀತಿ ಸಂಹಿತೆ ಜಾರಿಗೊಂಡಿದೆ. ಪಂಚಾಯತ್ ನ ಸಂಸ್ಥೆಗಳ ಮುಖ್ಯಸ್ಥರು ಸಭೆ ನಡೆಸಿ ಹಸುರು ನೀತಿ ಸಂಹಿತೆ ಪಾಲನೆ ಬಗ್ಗೆ ಅವಲೋಕನನಡೆಸುತ್ತಾರೆ. ಧಾರ್ಮಿಕ ಉತ್ಸವ ಇತ್ಯಾದಿ ಕಾರ್ಯಕ್ರಮಗಳಲ್ಲೂ ಶುಚಿತ್ವ ಜಾಗೃತಿ ನಡೆಸುವ ಕಾಯಕ ಜರುಗುತ್ತಿವೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಲ ಗ್ರಾಮ ಸಭೆಗಳು:
ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಲಗ್ರಾಮಸಭೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿಯೂ ಬೇಡಡ್ಕ ಗ್ರಾಮಪಂಚಾಯತ್ ಗೆ ಸಲ್ಲುತ್ತದೆ. ಜಲದಿನಾಚರಣೆ, ಜಲಯಾತ್ರೆ, ಜಲಸಂಸತ್ತು ಸಹಿತ ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ನಡೆಸಲಾಗಿದೆ. ಪಂಚಾಯತ್ ನ ಪ್ರಧಾನ ಜಲಾಶಯಗಳ ಸಂರಕ್ಷಣೆ ಸಂಬಂಧ ತರಗತಿಗಳು ನಡೆದಿವೆ. ಐ.ಡಬ್ಲ್ಯೂ. ಎಂ.ಪಿ. ಅಂಗವಾಗಿ ಮೊದಲ ಹಂತದಲ್ಲಿ ಮುಂಡನ್ ಪಳ್ಳ, ಪರಯಂ ಪಳ್ಳ, ಮುನ್ನಾಡ್, ಪೂಕುನ್ನತ್ ಪಾರ 4 ಹಳ್ಳಗಳ ಶುಚೀಕರಣ ನಡೆಸಲಾಗಿದೆ. ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆ ಯಲ್ಲಿ ಅಳವಡಿಸಿ 92 ಬಾವಿಗಳು, 152 ಕೆರೆಗಳು, 4 ಸಾವಿರ ಮೀಟರ್ ಮಣ್ಣು ದಿಬ್ಬೆ, 3 ಸಾವಿರ ಮೀಟರ್ ಕಲ್ಲ ದಿಬ್ಬೆ, ಪೆರ್ಕಾಲೇಷನ್ ಟಾಂಕಿಗಳು ಇತ್ಯಾದಿಗಳ ಶುಚೀಕರಣ, ಸಾರ್ವಜನಿಕ ಕರೆಗಳ ಪುನಶ್ಚೇತನ, ತೆಂಗಿನನಾರಿನ ಭೂಹಾಸು ಬಳಕೆ (ಕಟ್ಟವಯಲ್-240 ಮೀಟರ್), ಹಳ್ಳ ಪುನಶ್ಚೇತನ ಇತ್ಯಾದಿ ವಹಿಸಿ ನಡೆಸಲಾಗಿದೆ. ವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿ ಜಿಲ್ಲಾ ಮಟ್ಟದ ಕಂತು ಸಹಿತ ಬಳಸಿಕೊಂಡು 125 ಮನೆಗಳಲ್ಲಿ ಬಾವಿಗಳ ರೀಚಾರ್ಜ್ ಸೌಲಭ್ಯ ನಡೆಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ಮಳೆನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ವಾರ್ಡ್ ಮಟ್ಟದಲ್ಲಿಮಳೆಸ್ನೇಹಿತರು ಎಂಬ ಹೆಸರಿನಲ್ಲಿ ಜಲಸಂರಕ್ಷಣೆ ಗುಂಪುಗಳನ್ನು ರಚಿಸಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಶುಚಿತ್ವ-ತ್ಯಾಜ್ಯ ಸಂಸ್ಕರಣೆ, ಕೃಷಿ, ಜಲಸಂರಕ್ಷಣೆ ಎಂಬ ವಲಯಗಳಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಪಂಚಾಯತ್ ಎಂದು ಗುರುತಿಸಿ ಹರಿತ ಕೇರಳಂಮಿಷನ್ ವತಿಯಿಂದ ನೀಡಲಾಗುವ ಮುಖ್ಯಮಂತ್ರಿ ಅವರು ಹರಿತ ಅವಾರ್ಡ್ -2019 ಗೆ ಬೇಡಡ್ಕ ಗ್ರಾಮಪಂಚಾಯತ್ ಭಾಜನವಾಗಿದೆ. ಹರಿತಕೇರಳಂಇಷನ್ ನ ಉಪಮಿಷನ್ ಗಳಾಗಿರುವ ಶುಚಿತ್ವ-ತ್ಯಾಜ್ಯ ಸಂಕರಣೆ, ಜಲಸಂರಕ್ಷಣೆ, ಜಲಸಮೃದ್ಧಿ, ಕೃಷಿ ಅಭಿವೃದ್ಧಿ-ಸುಜಲಾಂ ಸುಫಲಾಂ ಇತ್ಯಾದಿ ಜಾರಿಗೊಳಿಸಿದ ಪಂಚಾಯತ್ ಗಳನ್ನು ಈ ಪ್ರಶಸ್ತಿಗಾಗಿ ಪರಿಶೀಲಿಸಲಾಗುತ್ತಿದೆ.