ಪೆರ್ಲ;ಅಗತ್ಯವನ್ನೂ ಮೀರಿದ ಮಳೆ ನಮ್ಮಲ್ಲಾದರೂ ಬರ ಪರಿಸ್ಥಿತಿ ಮಾತ್ರ ವರ್ಷದಿಂದ ವರ್ಷಕ್ಕೆ ತೀವ್ರಗೊಳ್ಳುತ್ತಿದೆ. ಮಳೆ ಕಡಿಮೆಯಾದೊಡನೆ ಜಲಮೂಲಗಳು ಬರಿದಾಗುತ್ತಿದೆ.ಆದರೆ ಜನ ಮನದಲ್ಲಿ ಬರ ಭಾವನೆ ಇನ್ನೂ ಮೂಡಿಲ್ಲ ಎಂದು ಜಲತಜ್ಞ ಶ್ರೀಪಡ್ರೆ ಖೇದ ವ್ಯಕ್ತ ಪಡಿಸಿದರು.
ಪಡ್ರೆ ಗ್ರಾಮದ ನೀರ ನೆಮ್ಮದಿಯ ಅಡಿಪಾಯ ತೋಡಿಗೆ ಹಿಂದೆ ಕಟ್ಟುತ್ತಿದ್ದ ಕಟ್ಟಗಳನ್ನು ಮತ್ತೆ ಕಟ್ಟುವ ಮಹಾತ್ಕಾರ್ಯ, ಪಡ್ರೆ ಸಜಂಗದ್ದೆ ಮನೆಯಲ್ಲಿ ನಡೆದ ಕಟ್ಟ ಕಟ್ಟುವ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಡಾ.ವೇಣು ಕಳೆಯತ್ತೋಡಿ ಅವರನ್ನು ಪರಿಚಯಿಸಿ ಮಾತನಾಡಿದರು.
ನೀರಿನ ಅಸಮರ್ಪಕ ನಿರ್ವಹಣೆ ಮತ್ತು ಜಲ ನಿರಕ್ಷರತೆಯಿಂದ ಜಲ ಮೂಲಗಳು ಬಲು ಬೇಗನೆ ಬರಿದಾಗುತ್ತಿದೆ.ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಮಹಾ ದುರಂತ ಎದುರಾಗಬಹುದು.ನೀರಿನ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಮನೆ ಮನೆಯಲ್ಲೂ ನೀರನ್ನು ಕಟ್ಟೆಚ್ಚರದಿಂದ ಬಳಸುವ ಪರಿಪಾಠ ಬೆಳೆಸಬೇಕು. ನೀರಿನೊಂದಿಗೆ ಸಹೋದರತೆ, ನಮ್ಮ ನೀರು ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು. ಸ್ಥಳೀಯ ಕೃಷಿಕರು ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಕಟ್ಟಗಳ ಸಂಖ್ಯೆ ಕಡಿಮೆಯಾಗಿರುವುದೇ ತೋಡಲ್ಲಿ ನೀರು ಬತ್ತಿ ಹೋಗಲು ಕಾರಣವಾಗಿದೆ.ಇದೇ ಕಾರಣದಿಂದ ಪರೋಕ್ಷವಾಗಿ ಸಮೀಪದ ಎಲ್ಲಾ ಜಲ ಮೂಲಗಳ ನೀರಿನ ಮಟ್ಟ ಬಲು ಬೇಗ ಕುಸಿಯುತ್ತಿದೆ. ಕಟ್ಟಗಳ ನಿರ್ಮಾಣದಲ್ಲೂ ಲೋಪ ಸಾಧ್ಯತೆಯಿದೆ. ಸೂಕ್ತ ಜಾಗದ ಆಯ್ಕೆ, ಸರಿಯಾದ ಅಡಿಪಾಯ, ಕಾಮಗಾರಿಯ ಗುಣಮಟ್ಟ ಮತ್ತು ಕಟ್ಟದ ಬದಿ, ಕೆಳಭಾಗದಲ್ಲಿ ನೀರಿನ ಸೋರಿಕೆಯ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು.ತೋಡನ್ನು ನಾವು ಸಂರಕ್ಷಿಸಿದಲ್ಲಿ ತೋಡು ನಮ್ಮನ್ನು ರಕ್ಷಿಸುವುದು.ನಮ್ಮ ಜಲ ಮೂಲಗಳ ನೀರಿನ ಮಟ್ಟ ಸುಧಾರಿಸುವುದು.ತೋಡಲ್ಲಿ ವರ್ಷ ಪೂರ್ತಿ ನೀರು ಹರಿಸುವ ಕನಸನ್ನು ಸಾಕಾರಗೊಳಿಸುವ ಪ್ರಯತ್ನಗಳನ್ನು ಆರಂಬಿಸಲಾಗಿದ್ದು ಸ್ಥಳೀಯ ಕೃಷಿಕರು ಸಹಕರಿಸುವಂತೆ ಆಗ್ರಹಿಸಿದರು.
ಡಾ.ವೇಣು ಕಳೆಯತ್ತೋಡಿ ಮಾತನಾಡಿ, ರಭಸವಾಗಿ ಹರಿಯುವ ತೋಡಿಗೆ ತಡೆಯೊಡ್ಡಿ ಕಟ್ಟ ನಿರ್ಮಿಸುವುದು ಕಠಿಣ ಹಾಗೂ ಜಾಣ್ಮೆಯ ಕೆಲಸ.ಕಟ್ಟ ಕಟ್ಟುವುದರಿಂದ ಕಟ್ಟಗಳಲ್ಲಿ ನೀರು ಸಂಗ್ರಹವಾಗುವ ಪ್ರತ್ಯಕ್ಷ ಲಾಭದೊಂದಿಗೆ ಪರೋಕ್ಷವಾಗಿ ಕಟ್ಟಗಳ ಜಲಮಟ್ಟದ ಮೇಲ್ಭಾಗದ ಜಲಮೂಲಗಳಲ್ಲೂ ನೀರಿನ ಮಟ್ಟ ಸುಧಾರಿಸುವುದು.ಕೊಳವೆ ಬಾವಿ ನೀರಿಗೆ ಹೋಲಿಸಿದಲ್ಲಿ ಕಟ್ಟದ ನೀರಿನಲ್ಲಿ ಕೃಷಿ ಸಮೃದ್ಧವಾಗಿ ಬೆಳೆಯುವುದು ಎಂದರು.
ಎಣ್ಮಕಜೆ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಮನುಷ್ಯ ಮತ್ತು ಮಣ್ಣಿನ ಸಂಪರ್ಕವೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬೆಟ್ಟಂಪಾಡಿ ಕಾಲೇಜು ವಿದ್ಯಾರ್ಥಿಗಳು ದಿನವಿಡೀ ಮಣ್ಣು, ನೀರಿನೊಂದಿಗೆ ಕಟ್ಟ ನಿರ್ಮಾಣ ಕಾಯಕಕ್ಕೆ ಕೈಜೋಡಿಸಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದಂತಾಗಿದೆ.ಕಟ್ಟದ ಮಹತ್ವವನ್ನು ಮನೆ ಮಂದಿ, ಊರುಗಳಿಗೆ ಹಬ್ಬಿಸಿ ವ್ಯಾಪಕ ಕಟ್ಟ ನಿರ್ಮಾಣದ ಕಾರಣೀಕರ್ತರಾಗಬೇಕು ಎಂದರು.,ಬೆಟ್ಟಂಪಾಡಿ ಕಾಲೇಜು ಎನ್ನೆಸ್ಸೆಸ್ ಯೋಜನಾಕಾರಿ ಹರಿಪ್ರಸಾದ್ ಎಸ್., ಸಾಮಾಜಿಕ ಹುರಿಯಾಳು ಶ್ರೀನಿವಾಸ್ ಸ್ವರ್ಗ ಮಾತನಾಡಿದರು. ಸುಧಾರಿತ ಕಟ್ಟದ ಪಾಲುದಾರ ಕೃಷಿಕ ಡಾ.ವೇಣು ಕಳೆಯತ್ತೋಡಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಭಾರತಿ ಎಸ್ ಸಜಂಗದ್ದೆ ಮತ್ತು ಸ್ವರ್ಗ ಶಾಲಾ ಮುಖ್ಯ ಶಿಕ್ಷಕಿ ಗೀತಾಕುಮಾರಿ ಜಲಪೂಜೆ ನೆರವೇರಿಸಿದರು.ಸಾಹಿತಿ ಶ್ರೀನಿವಾಸ್ ಸ್ವರ್ಗ ರಚಿಸಿದ 'ಕಟ್ಟಗಳ ಹಬ್ಬ' ಕವಿತೆಯನ್ನು ಜಯಲಕ್ಷ್ಮಿ ಸಜಂಗದ್ದೆ ಹಾಡಿದರು.ಎಣ್ಮಕಜೆ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ. ಜಲ ಸಂರಕ್ಷಣೆ ಪ್ರತಿಜ್ಞೆ ಭೋಧಿಸಿದರು.
ಪುತ್ತೂರು ವಿವೇಕಾನಂದ ಕಾಲೇಜು ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಭರತ್‍ರಾಜ್, ಬೆಟ್ಟಂಪಾಡಿ ಕಾಲೇಜು ಎನ್ನೆಸ್ಸೆಸ್ ಘಟಕದ ನಾಯಕಿ ಕಾವ್ಯ ಎಸ್.ಸಾಯ, ಊರ ಗಣ್ಯರು, ನೀನೆಪ ಸದಸ್ಯರು ಉಪಸ್ಥಿತರಿದ್ದರು. ರಶ್ಮಿ ಸಜಂಗದ್ದೆ ಪ್ರಾರ್ಥಿಸಿದರು.ಹಿರಿಯ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಸ್ವಾಗತಿಸಿದರು.'ನೀನೆಪ' ಅಧ್ಯಕ್ಷ ಶ್ರೀಹರಿ ಭಟ್ ಸಜಂಗದ್ದೆ ವಂದಿಸಿದರು.ಸುಬ್ರಹ್ಮಣ್ಯ ಭಟ್ ಕೆ.ವೈ.ನಿರೂಪಿಸಿದರು.