ಬದಿಯಡ್ಕ: ದೇಶದ ಪ್ರಧಾನಿ ನರೇಂದ್ರಮೋದಿಯವರು ಮನ್ ಕೀ ಬಾತ್‍ನಲ್ಲಿ ಕರೆನೀಡಿದಂತೆ ಕೇಂದ್ರ ಸರಕಾರದ ಕ್ರೀಡಾ ವಿಭಾಗದ ಆದೇಶದ ಪ್ರಕಾರ ಫಿಟ್ ಇಂಡಿಯಾ ಪ್ಲೋಗಿಂಗ್ ಎಂಬ ಘೋಷಣೆಯೊಂದಿಗೆ ಬದಿಯಡ್ಕ ಚಿನ್ಮಯ ವಿದ್ಯಾಲಯದ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮಂಗಳವಾರ ಬೆಳಗ್ಗೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಮೇಲಿನ ಪೇಟೆಯಿಂದ ಆರಂಭವಾದ ರ್ಯಾಲಿಗೆ ಪ್ರಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಧ್ವಜವನ್ನು ಶಾಲಾ ನಾಯಕನಿಗೆ ಹಸ್ತಾಂತರಿಸಿ ಚಾಲನೆಯನ್ನು ನೀಡಿದರು.
ಜನಜಾಗೃತಿಯನ್ನುಂಟುಮಾಡುವ ಸೂಚನಾ ಫಲಕಗಳು ಹಾಗೂ ಘೋಷಣಾವಾಕ್ಯಗಳನ್ನು ಅಂಟಿಸಿದ ಕಸದಬುಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡು ರಸ್ತೆಬದಿಯ ಕಸಗಳನ್ನು ಶೇಖರಿಸಿ ಸಾರ್ವಜನಿಕರ ಗಮನಸೆಳೆದರು. ಪೋಲೀಸ್ ಠಾಣೆಯ ಮುಂಭಾಗದಲ್ಲಿರುವ ಚಿನ್ಮಯ ಶಿಶು ವಿಹಾರದಲ್ಲಿ ಸಮಾಪನಗೊಂಡಿತು. ಚಿನ್ಮಯ ವಿದ್ಯಾಲಯದ ಕಾರ್ಯದರ್ಶಿ ಜ್ಞಾನದೇವ ಶೆಣೈ ಬದಿಯಡ್ಕ, ಶಿಕ್ಷಕ ವೃಂದ ರ್ಯಾಲಿಯಲ್ಲಿ ಜೊತೆಗಿದ್ದರು.
ಸಿಬಿಎಸ್‍ಇ ಶಾಲೆಗಳಿಗೆ ಕೇಂದ್ರ ಸರ್ಕಾರದ ಆದೇಶ :
ಜಾಗಿಂಗ್ ಎಂದರೆ ಪ್ರತೀದಿನ ಬೆಳಗಿನ ಜಾವ ನಡೆಯುವುದಾಗಿದೆ. ಫಿಟ್ ಇಂಡಿಯಾ ಪ್ಲೋಗಿಂಗ್ ಎಂದರೆ ಪ್ರತೀದಿನ ಬೆಳಗಿನ ಜಾಗಿಂಗ್ ವೇಳೆ ನಾವು ಓಡಾಡುವ ರಸ್ತೆಯನ್ನು ಕಸಮುಕ್ತಗೊಳಿಸಬೇಕೆಂಬುದಾಗಿದೆ. ಓಡುವ ವೇಳೆ ಕಸವನ್ನು ಶೇಖರಿಸಿ ಶುಚಿತ್ವಕ್ಕೆ ಆದ್ಯತೆಯನ್ನು ನೀಡಬೇಕಾಗಿದೆ. ದಿನನಿತ್ಯ ಓಡುವುದು, ನಡೆಯುವುದು ಆರೋಗ್ಯಕ್ಕೆ ಹೇಗೆ ಉತ್ತಮವೋ ಅದೇ ರೀತಿ ಪರಿಸರದ ಕುರಿತು ಕಾಳಜಿಯನ್ನಿಟ್ಟು ಈ ರೀತಿಯ ಕಾರ್ಯಕ್ರಮವನ್ನು ಕೇಂದ್ರ ಸರಕಾರವು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಸಿಬಿಎಸ್‍ಇ ಶಾಲೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಸರಕಾರದ ನಿರ್ದೇಶನವಿದೆ. ಈ ನಿಟ್ಟಿನಲ್ಲಿ ಬದಿಯಡ್ಕ ಪೇಟೆಯನ್ನು ಆಯ್ಕೆಮಾಡಿಕೊಂಡು ಜನಜಾಗೃತಿಗಾಗಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು ಎಂದು ಶಾಲಾ ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ ತಿಳಿಸಿದ್ದಾರೆ.ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ ಎಂಬುದು ಸಾಕಾರವಾಗಲಿ ಎಂದು ಅವರು ತಿಳಿಸಿದರು.
ಅಭಿಮತ:
5ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತೀತಿಂಗಳು ಶಾಲೆಯ ಫಿಟ್ ಇಂಡಿಯಾ ತಂಡವು ವಿವಿಧ ಕಡೆಗಳಲ್ಲಿ ರ್ಯಾಲಿಯನ್ನು ಹಮ್ಮಿಕೊಳ್ಳಲಿದ್ದು, ಮುಂದಿನ ಕಾರ್ಯಕ್ರಮಕ್ಕೆ ಪೆರ್ಲ ಪೇಟೆಯನ್ನು ಆಯ್ದುಕೊಳ್ಳಲಾಗಿದೆ.
- ಪುಷ್ಪಾ, ಶಾಲಾ ದೈಹಿಕ ಶಿಕ್ಷಕಿ
(ಫಿಟ್ ಇಂಡಿಯಾ ಶಾಲಾ ಸಂಚಾಲಕಿ)