ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಬ್ರಹ್ಮಕಲಶ ಹಾಗೂ ಐದು ವರ್ಷಗಳಿಗೊಮ್ಮೆ ನಡೆಯುತ್ತಿರುವ ವಿಶೇಷ ನಡಾವಳಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಶ್ರೀ ಕ್ಷೇತ್ರ ವಠಾರದಲ್ಲಿ ಜರಗಿದ ಸಮಾರಂಭದಲ್ಲಿ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ ಅವರು ಆಮಂತ್ರಣ ಪತ್ರಿಕೆಯ ಬಿಡುಗಡೆ ನೆರವೇರಿಸಿದರು. ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಮೋಹನ್‍ದಾಸ್ ಬೆಂಗಳೂರು ಅವರು ಪ್ರಥಮ ಪ್ರತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ತಂತ್ರಿವರ್ಯರು ಉತ್ಸವವು ನಿರ್ವಿಘ್ನವಾಗಿ ನಡೆಯುವಂತೆ ಹಾರೈಸಿದರು.
ಸಮಾರಂಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಎಂ. ಪ್ರಮೋದ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಎಳೆ ಚೆಟ್ಟಿಯಾರ್ ಚಂದ್ರಶೇಖರ.ಕೆ, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ಗೋಪಾಲ ಚೆಟ್ಟಿಯಾರ್, ಕಾರ್ಯದರ್ಶಿ ಎನ್. ಪ್ರಭಾಕರ, ಹಣಕಾಸು ಸಮಿತಿ ಅಧ್ಯಕ್ಷ ದೇವದಾಸ ಕುಂಟಂಗೇರಡ್ಕ, ರಾಮಚಂದ್ರ ತೊಕ್ಕೋಟು, ಎಂ. ನಾರಾಯಣ, ಸಾಂಸ್ಕøತಿಕ ಸಮಿತಿ ಸಂಚಾಲಕ ರವಿ ನಾಯ್ಕಾಪು, ಗುಲಾಬಿ ಲಕ್ಷ್ಮಣ ಮೊದಲಾದವರು ಮಾತನಾಡಿದರು. ಉತ್ಸವ ಸಮಿತಿ ಪ್ರಧಾನ ಸಂಚಾಲಕ ನ್ಯಾಯವಾದಿ ಎನ್. ಪದ್ಮನಾಭ ಸ್ವಾಗತಿಸಿ, ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಸದಾಶಿವ ಮವ್ವಾರು ವಂದಿಸಿದರು. ಗಣ್ಯರು ಉಪಸ್ಥಿತರಿದ್ದರು. ಮುಂದಿನ ಫೆಬ್ರವರಿ 27 ರಿಂದ ಮಾರ್ಚ್ ಒಂದರ ವರೆಗೆ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈಭವದ ಉತ್ಸವ ನೆರವೇರಲಿದೆ.