ಮುಳ್ಳೇರಿಯ: ಗಡಿ ಗ್ರಾಮ ಬೆಳ್ಳೂರು ಪಂಚಾಯತಿ ವ್ಯಾಪ್ತಿಯ ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ಕಗ್ಗಲ್ಲು ಕ್ವಾರೆ ಕಾರ್ಯಚರಿಸುತ್ತಿದ್ದು, ಪದೇ ಪದೇ ಕ್ವಾರೆಯಲ್ಲಿ ಭಯಾನಕ ಸ್ಪೋಟ ಸಂಭವಿಸುವ ಸಂದರ್ಭದಲ್ಲಿ ಸ್ಥಳೀಯರ ಸ್ಥಳಕ್ಕೆ, ಮನೆಗೆ ಕಗ್ಗಲ್ಲು ತುಂಡುಗಳು ಬೀಳುತ್ತಿದ್ದು, ಸ್ಥಳೀಯರು ಆತಂಕದಿಂದ ಜೀವನ ಸಾಗಿಸಬೇಕಾಗಿ ಬಂದಿದೆ.
ಇತ್ತೀಚೆಗೆ ಕ್ವಾರೆಯಲ್ಲಿ ನಡೆದ ಸ್ಫೋಟದ ಸಂದರ್ಭದಲ್ಲಿ ದೊಂಪತ್ತಡ್ಕದ ಇಸ್ಮಾಯಿಲ್ ಹಾಜಿಯ ಮನೆಗೆ ಕಲ್ಲು ಬಿದ್ದಿದ್ದು, ಮನೆಯ ಮಾಡು ನಾಶವಾಗಿತ್ತು. ಜೊತೆಗೆ ಅವರ ಪುತ್ರ ತಾಜು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು ಹಾಗೂ ಗ್ರಾಮಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಕ್ವಾರೆಯ ಸಮೀಪದ ಸರ್ವೇಶ್ ರವರ ಮನೆಯ ಉಪ ಕಟ್ಟಡಕ್ಕೂ ಕಲ್ಲು ಬಿದ್ದಿದ್ದು, ಆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ನಡೆಯಲಿದ್ದ ದುರಂತ ತಪ್ಪಿಹೋಗಿತ್ತು. ಈ ಹಿನ್ನೆಲೆಯಲ್ಲಿ ಆರ್. ಡಿ. ಓ, ಜಿಲ್ಲಾಧಿಕಾರಿ, ಬೆಳ್ಳೂರು ಗ್ರಾಮ ಪಂಚಾಯತಿ, ಗ್ರಾಮ ಕಚೇರಿ ಹಾಗೂ ಅದೂರು ಪೆÇಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆರ್. ಡಿ. ಓ ಸ್ಥಳ ಪರಿಶೀಲಿಸಿ, ಈ ವಿಚಾರದ ಕುರಿತು ಅನ್ವೇಷಣೆ ನಡೆಸುತ್ತೇನೆ ಎಂದಿದ್ದರೂ, ಈ ತನಕ ಯಾವುದೇ ಅನ್ವೇಷಣೆ ನಡೆದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದಲ್ಲದೇ ಇತ್ತೀಚೆಗೆ ಕಣ್ಣ ಪಾಟಾಳಿ ಎಂಬವರು ತನ್ನ ಗದ್ದೆಯಲ್ಲಿ ಪೈರು ಕಟಾವು ಮಾಡುತ್ತಿದ್ದ ಸಂದರ್ಭದಲ್ಲೂ ಕ್ವಾರೆಯ ಭಯಾನಕ ಸ್ಪೋಟದಿಂದಾಗಿ ಕಗ್ಗಲ್ಲು ತುಂಡುಗಳು ಬಿದ್ದಿತ್ತು. ಹಾಗೂ ಈ ಹಿಂದೆ ಮಹಾಲಿಂಗ ನಾಯ್ಕರವರ ಮನೆಗೂ ಕಲ್ಲು ಬಿದ್ದಿತ್ತು. ಆದರೆ ಹಣ ಬಲದಿಂದಾಗಿ ಅಧಿಕಾರಿಗಳನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಕ್ವಾರೆ ಮಾಲಕನ ವಿರುದ್ಧ ದೂರು ಸಲ್ಲಿಸಿ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತು ದೂರು ಸಲ್ಲಿಸದೇ ಸುಮ್ಮನಿದ್ದಾರೆ.
ಇಲ್ಲಿಯ ಕ್ವಾರೆಯ ಸನಿಹ ಪನೆಯಾಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಸಂಶಯವಿಲ್ಲ. ಯಾವ ಸಂದರ್ಭದಲ್ಲಿ ಎಲ್ಲಿಗೆ ಕಲ್ಲು ಬೀಳುವುದೋ ಎಂದು ಹೆದರಿ ಸ್ಥಳೀಯರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ.
ಸ್ಥಳೀಯ ನಿವಾಸಿಗಳು ಈ ರೀತಿಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಮನಗಂಡು ಬೆಳ್ಳೂರು ಗ್ರಾಮ ಪಂಚಾಯತಿ ಆಡಳಿತ ಸಮಿತಿ ಸಭೆಯಲ್ಲಿ ದೊಂಪತ್ತಡ್ಕದ ಕಗ್ಗಲ್ಲು ಕ್ವಾರೆಗೆ ಸ್ಟಾಪ್ ಮೆಮೋ ನೀಡಲು ತೀರ್ಮಾನಿಸಿದ್ದರು. ಆದರೆ ಕೈಗೊಂಡ ತೀರ್ಮಾನವನ್ನು ಜಾರಿಗೊಳಿಸುವಲ್ಲಿ ಆಡಳಿತ ಸಮಿತಿ ವಿಫಲವಾಗಿದೆ.
ಇನ್ನಾದರೂ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯರ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆಯಿದೆ.