ಕುಂಬಳೆ: ಕುಂಬಳೆ ಸೀಮೆಯ ಇಚ್ಲಂಪಾಡಿ ಗ್ರಾಮದ ಮುಂಡಪಳ್ಳ ಎಂಬ ನಯನಮನೋಹರವಾದ ಸರೋವರದಂತಿರುವ ಪರಿಸರದಲ್ಲಿ ಇದೀಗ ಭವ್ಯವಾದ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಾಲಯವೊಂದು ತಲೆ ಎತ್ತಿ ನಿಂತಿದ್ದು, ನೂತನ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ಫೆಬ್ರವರಿ 28ರಿಂದ ಮಾರ್ಚ್ 7ರವರೆಗೆ ಶ್ರೀ ಸಾನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದೆ. ಸರ್ಕಾರದ ಸಹಕಾರದೊಂದಿಗೆ ಕುತ್ತಿಕ್ಕಾರು ಮನೆಯ ದಿ.ಸುಬ್ಬಣ್ಣ ಶೆಟ್ಟಿ ಅವರ ಪುತ್ರ ಕೆ.ಕೆ. ಶೆಟ್ಟಿ ಅವರು ದೇವಳದ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ನಾಗರಿಕರು ಅತ್ಯುತ್ಸಾಹದಿಂದ ಕ್ಷೇತ್ರದ ಕಾರ್ಯಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ಕ್ಷೇತ್ರದ ಪರಿಸರದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಶಂಕರನಾರಾಯಣ ರಾವ್ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಮಂಜುನಾಥ ಆಳ್ವ ಮಡ್ವ, ಗುರುಮೂರ್ತಿ ನಾಯ್ಕಾಪು, ಶಿವರಾಮ ಭಂಡಾರಿ ಕಾರಿಂಜ, ಶಿವರಾಮ ಭಟ್, ಉಷಾ ಶಿವರಾಮ ಭಟ್, ಶಿವರಾಮ ಆಳ್ವ ಕಾರಿಂಜ, ಜಯಪ್ರಸಾದ ರೈ ಕಾರಿಂಜ, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು, ಜಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.