ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಮಾನ್ಯ ಜ್ಞಾನೋದಯ ಶಾಲೆಯ ಜಂಟಿ ಆಶ್ರಯದಲ್ಲಿ ಬುಧವಾರ ಮಾನ್ಯದಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಿತು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ಇಂತಹ ಶಿಬಿರಗಳು ಊರಿನ ಜನತೆಗೆ ಪ್ರಯೋಜನಪ್ರದವಾಗಿದೆ. ಜನರ ಆರೋಗ್ಯದ ಕುರಿತು ಕಾಳಜಿಯನ್ನಿಟ್ಟು ನಡೆಯುವ ಶಿಬಿರಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಲಭಿಸುತ್ತವೆ ಎಂದು ತಿಳಿಸಿ ಶುಭಹಾರೈಸಿದರು. ಗ್ರಾ.ಪಂ. ಸದಸ್ಯ, ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಟಿ.ಗೋವಿಂದನ್ ನಂಬೂದಿರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್ ಬಿ.ಎಂ., ಕುಂಬಳೆ ಆಯುರ್ವೇದ ವೈದ್ಯಾಧಿಕಾರಿ ಡಾ. ಮಹೇಶ್ ಶುಭಾಶಂಸನೆಗೈದರು. ಬದಿಯಡ್ಕ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯೆ ಡಾ. ರಶ್ಮಿ ಸ್ವಾಗತಿಸಿ, ಮಾನ್ಯ ಶಾಲಾ ನೌಕರ ಸಂಘದ ಕಾರ್ಯದರ್ಶಿ ರೆಜು ಎಸ್.ಎಸ್. ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.