ಕುಂಬಳೆ: ಆಟ-ಕೂಟ ಮತ್ತು ಸಾಮಾಜಿಕ ಕೈಂಕರ್ಯಗಳಲ್ಲಿ ವಾಚಿಕರಸಕ್ಕೆ ಭಾವದ ಮೆರುಗನ್ನಿತ್ತು ಪೌರಾಣಿಕ ಸಂದೇಶಗಳನ್ನು ಜನತೆಗೆ ತಲುಪಿಸಿ, ನೈತಿಕ ಮೌಲ್ಯದ ಸಮಾಜ ಕಟ್ಟುವಲ್ಲಿ ನುಡಿಗಡಲಿನ ಸಾಮ್ರಾಟ ಕುಂಬಳೆ ಸುಂದರರಾಯರ ಕೊಡುಗೆ ಅದ್ವಿತೀಯ. ಪಾರ್ತಿಸುಬ್ಬನ ಬಳಿಕ ಕುಂಬಳೆಯ ಮಣ್ಣಿಗೆ ಮಾನ್ಯತೆಯ ಕೀರ್ತಿ ತಂದಿತ್ತ ಅವರು ಇಡೀ ಸೀಮೆಯ ಅಭಿಮಾನದ ಸಂಕೇತ. ಅವರು ಕೇಂದ್ರ ಸರ್ಕಾರ ನೀಡುವ ಪದ್ಮ ಪುರಸ್ಕಾರಕ್ಕೆ ಅರ್ಹತೆಯಿಂದ ಯೋಗ್ಯರಾದ ಕಲಾವಿದ. ಅವರಿಗೆ ಅಂಗೀಕಾರ, ಮನ್ನಣೆಯ ಮರ್ಯಾದೆ ಸಿಕ್ಕರೆ ಅದು ಕುಂಬಳೆಯ ನಾಡಿಗೆ ಸಲ್ಲುವ ಅಂಗೀಕಾರ ಎಂದು ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ, ಲೇಖಕ ಎಂ.ನಾ.ಚಂಬಲ್ತಿಮಾರ್ ಹೇಳಿದರು.
ಕುಂಬಳೆ ಸಮೀಪದ ನಾಯ್ಕಾಪು ಸಾರ್ವಜನಿಕ ಏಕಾಹ ಭಜನಾ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ ಅಖಂಡ ಭಜನಾ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಕುಂಬಳೆ ಸುಂದರ ರಾಯರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಅವರು ಕುಂಬ್ಳೆಯವರ ಸಾಧನೆ ಯುವ ಪೀಳಿಗೆಗೆ ಪ್ರೇರಣಾದಾಯಕವಾಗಿದೆ. ಸ್ವಾಧ್ಯಾಯದಿಂದಲೂ ಒಬ್ಬಾತನಿಗೆ ವಿದ್ವತ್ ಪಡೆದು ಮೇರುಮಟ್ಟಕ್ಕೇರಿ ಸಮಾಜದಿಂದ ಮಾನಿತನಾಗಬಹುದು ಎಂಬುದಕ್ಕೆ ಸುಂದರ ರಾವ್ ನಮ್ಮ ಕಣ್ಣೆದುರಿನ ನಿದರ್ಶನ ಎಂದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರಿಗೆ ಚೀರುಂಭಾ ಭಗವತಿ ಕ್ಷೇತ್ರದಿಂದ ಪೂರ್ಣಕುಂಭ ಸ್ವಾಗತ ನೀಡುವ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಶಾಸ್ತಾರ ವನದಲ್ಲಿ ಭಜನಾ ಸಪ್ತಾಹ ಮಾಣಿಲ ಸ್ವಾಮೀಜಿ ದೀಪಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಅಖಂಡ ಭಜನಾ ಸಪ್ತಾಹ ಸಮಿತಿ ಅಧ್ಯಕ್ಷ ಕಿಶನ್ ಕುಮಾರ್ ಅಧ್ಯಕ್ಷತೆ ವಹಿಸಿದರು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನವಿತ್ತರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಮಾತನಾಡುತ್ತಾ ಮನುಷ್ಯ ಜೀವನವೇ ದುರ್ಲಬ. ಅದನ್ನು ಸೃಷ್ಟಿಕರ್ತನ ಸೇವೆಗೆ ಮೀಸಲಿಟ್ಟು ಸದ್ವಿನಿಯೋಗಿಸಬೇಕು. ಆಗ ಜೀವನ ಪ್ರಕಾಶಮಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುಂಬಳೆ ಸುಂದರರಾವ್ ಅವರ ಜೊತೆಯಲ್ಲೇ ವೇ.ಮೂ.ಕೋಣಮ್ಮೆ ಮಹಾದೇವ ಭಟ್ ಮತ್ತು ಸ್ಥಳೀಯ ಮಹಾಲಿಂಗ ಶೆಟ್ಟಿ ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಪ್ರತ್ಯುತ್ತರಿಸಿದ ಕುಂಬಳೆ ಸುಂದರ ರಾವ್ ನಾಯ್ಕಾಪು ಪರಿಸರ ದಾರ್ಮಿಕ, ಸಾಂಸ್ಕøತಿಕ ವಿಚಾರಗಳೊಂದಿಗೆ ಪರಿಷ್ಕರಿಸಲ್ಪಟ್ಟು ಅಭಿವೃದ್ಧಿಗೊಳ್ಳುತ್ತಿರುವುದು ಸಂತಸ ತಂದಿದೆ ಎನ್ನುತ್ತಾ ತಾಯ್ನೆಲದ ಬಾಲ್ಯವನ್ನು ಮೆಲುಕು ಹಾಕಿದರು. ಮಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕ ಶಾರದಾ ಕೆ. ಧಾರ್ಮಿಕ ಭಾಷಣ ಮಾಡಿದರು. ನ್ಯಾಯವಾದಿ ಸದಾನಂದ ಕಾಮತ್, ಕುಂಬಳೆ ಗ್ರಾ.ಪಂ. ಸದಸ್ಯ ರಮೇಶ ಭಟ್, ಸುಧಾಕರ ಕಾಮತ್, ಹರೀಶ್ ಗಟ್ಟಿ, ಸುಜಿತ್ ರೈ, ಪುಷ್ಪಲತಾ, ಮಮತಾ ಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ ನಾಯ್ಕಾಪು ಶುಭಾಶಂಸನೆಗೈದರು. ಸಪ್ತಾಹ ಸಮಿತಿ ಕಾರ್ಯದರ್ಶಿ ಮುರಳೀಧರ ಯಾದವ್ ಸ್ವಾಗತಿಸಿ, ರವಿ ನಾಯ್ಕಾಪು ವಂದಿಸಿದರು.